ಜಿಲ್ಲಾ ಮಟ್ಟದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ: ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಸಾಮೂಹಿಕ ಯೋಗಾಭ್ಯಾಸ
ಯೋಗವನ್ನು ಜೀವನದ ಒಂದು ಭಾಗವಾಗಿ ಅಳವಡಿಸಿಕೊಳ್ಳಿ: ಜಿಲ್ಲಾಧಿಕಾರಿ ಡಾ. ಎನ್. ಶಿವಶಂಕರ್ ಸಲಹೆ
ಬೆಂಗಳೂರು ಗ್ರಾಮಾಂತರ ಜಿಲ್ಲೆ ಯೋಗವು ರೋಗವನ್ನು ದೂರ ಮಾಡುವ ಶಕ್ತಿ ಹೊಂದಿದೆ. ಪ್ರತಿಯೊಬ್ಬರು ಜೀವನದ ಒಂದು ಭಾಗವಾಗಿ ಯೋಗ ಅಳವಡಿಸಿಕೊಳ್ಳುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಡಾ. ಎನ್. ಶಿವಶಂಕರ್ ಅವರು ಹೇಳಿದರು.
ದೇವನಹಳ್ಳಿ ಟೌನ್ ನಲ್ಲಿರುವ ಕ್ರೀಡಾಂಗಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆಯುಷ್ ಕಛೇರಿ ಇವರ ಸಹಯೋಗದಲ್ಲಿ ಇಂದು ನಡೆದ 10 ನೇ ಜಿಲ್ಲಾಮಟ್ಟದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ವಿವಿಧ ಯೋಗ ಆಸನ ಮಾಡುವ ಮೂಲಕ ಚಾಲನೆ ನೀಡಿ, ಅವರು ಮಾತನಾಡಿದರು.
ಯೋಗಾಸನ ಅನ್ನೋದು ಜೂನ್ 21 ಕ್ಕೆ ಮಾತ್ರ ಸೀಮಿತವಾಗಬಾರದು. ಪ್ರತಿ ದಿನವೂ ನಮ್ಮೆಲ್ಲರ ಜೀವನದ ಭಾಗವಾಗಿ ಅಳವಡಿಸಿಕೊಂಡಾಗ ಯಾವುದೇ ರೋಗವೂ ನಮ್ಮಗಳ ಹತ್ತಿರ ಸುಳಿಯದು, ವಿದ್ಯಾರ್ಥಿಗಳು ಮನಸ್ಸು ಶುದ್ಧವಾಗಿ, ದೇಹ ಸದೃಢವಾಗಿ ಇಟ್ಟುಕೊಳ್ಳಲು ಯೋಗವೂ ಸಹಕಾರಿಯಾಗಲಿದೆ ಎಂದು ಹೇಳಿದರು.
ಅಂತರಾಷ್ಟ್ರೀಯ ಯೋಗ ದಿನಾಚರಣೆಯು ನಮ್ಮ ದೇಶದ ಸಾಂಸ್ಕೃತಿಕ ಸಂಪತ್ತನ್ನು ಸೂಚಿಸುತ್ತದೆ. ಆಧುನಿಕ ಯುಗದಲ್ಲಿ ಪ್ರತಿಯೊಬ್ಬರಿಗೂ ಯೋಗಾಭ್ಯಾಸ ಅತ್ಯವಶ್ಯಕ. ಯೋಗವೂ ಒಂದು ಕ್ರೀಡೆ, ಇದರಲ್ಲೂ ಅನೇಕ ರೀತಿಯಲ್ಲಿ ಸಾಧನೆಗೈದ ಸಾಧಕರನ್ನು ಕಾಣಬಹುದು ಎಂದರು.
ಈ ವೇಳೆ ಪತಂಜಲಿ ಯೋಗ ಪಟುಗಳು, ದೇವನಹಳ್ಳಿ ಟೌನ್ ನ ಹತ್ತಾರು ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ‘ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ’ ಎಂಬ ಈ ಬಾರಿಯ ಘೋಷವಾಕ್ಯದೊಂದಿಗೆ ಸಾಮೂಹಿಕವಾಗಿ ಮೂವತ್ತಕ್ಕೂ ಅಧಿಕ ವಿವಿಧ ಯೋಗಾಸನವವನ್ನು ಮಾಡಿದರು.
ಕ್ರೀಡೆ ಹಾಗೂ ಯೋಗ ತರಬೇತಿದಾರರಾದ ಭಾಗ್ಯಶ್ರೀ, ಶ್ರೀನಿವಾಸ ಅವರು ಒಂದು ಗಂಟೆ ಕಾಲ ವಿವಿಧ ಯೋಗ ಆಸನಗಳನ್ನು ಹೇಳಿಕೊಟ್ಟರು.
ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಎನ್.ಅನುರಾಧ, ಅಪರ ಜಿಲ್ಲಾಧಿಕಾರಿ ಅಮರೇಶ್ ಹೆಚ್, ದೇವನಹಳ್ಳಿ ತಹಶೀಲ್ದಾರ್ ಶಿವರಾಜ್, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲಾ ಆಯುಷ್ ಅಧಿಕಾರಿ ಡಾ. ಶುಹಬುದ್ದಿನ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಟಿ.ಎಲ್.ಎಸ್ ಪ್ರೇಮಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಕ ಅಧಿಕಾರಿ ಅನೀತಾಲಕ್ಷ್ಮೀ, ಆಯುಷ್ಯ ಇಲಾಖೆಯ ನೂಡಲ್ ಅಧಿಕಾರಿಗಳಾದ ಡಾ. ವಿಜಯಲಕ್ಷ್ಮೀ, ಡಾ. ಖುದಷಿಯಾ, ಹಿರಿಯ ವೈದ್ಯಾಧಿಕಾರಿ ಡಾ. ನಿರ್ಮಲಾ ವಸ್ತ್ರದ ಹಾಗೂ ಜಿಲ್ಲೆಯ ಎಲ್ಲಾ ಆಯುಷ್ ವೈದ್ಯಾಧಿಕಾರಿಗಳು ಸೇರಿದಂತೆ ಸಿಬ್ಬಂದಿ ವರ್ಗದವರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.