ಎ.ಸೀತಾರಾಮ್ ರವರ ಸ್ವಾರತ್ಯತ್ವದಲ್ಲಿ ಮೂಡಿಬರುತ್ತಿರುವ "ಸುವರ್ಣ ಲೇಖನಿ"ಹಾಗು "ನ್ಯೂಸ್ ಕರ್ನಾಟಕ1"

ಸುದ್ಧಿ ಹಾಗು ಜಾಹಿರಾತಕ್ಕೆ ಸಂರ್ಪಕಿಸಿ +91 8553310400

ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ನೌಕರರ ಬೇಡಿಕೆ ಈಡೇರಿಸಲು ಬದ್ಧ: ಪರಿಷತ್ ಸದಸ್ಯ ರಾಮೋಜಿ ಗೌಡ

ಬೆಂಗಳೂರು ಗ್ರಾಮಾಂತರ ಜಿಲ್ಲೆ ಸರ್ಕಾರಿ ನೌಕರರ ಹಲವು ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದು ನೌಕರರ ಆಶೋತ್ತರಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಬೆಂಗಳೂರು ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ರಾಮೋಜಿ ಗೌಡ ಅವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರ ಸಹಯೋಗದಲ್ಲಿ ಹೊಸಕೋಟೆಯ ಶ್ರೀ ಚನ್ನಭೈರೇಗೌಡ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದ 2023-24 ನೇ ಸಾಲಿನ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನಾ ಸಮಾರಂಭವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ವಿಧಾನ ಪರಿಷತ್ ಸದಸ್ಯ ಆಗುವುದಕ್ಕೂ ಮುನ್ನ ಸರ್ಕಾರಿ ನೌಕರನಾಗಿ ಕಾರ್ಯ ನಿರ್ವಹಿಸಿ, ನೌಕರರ ಸಂಘದ ಸದಸ್ಯನಾಗಿ ಹಲವು ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದೇನೆ. ನೌಕರರ ವಿವಿಧ ಬೇಡಿಕೆಗಳಾದ 7ನೇ ವೇತನ ಆಯೋಗ, ರಾಷ್ಟ್ರೀಯ ಪಿಂಚಣಿ ಯೋಜನೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೌಕರರಿಗೆ ನಗರ ಹೆಚ್.ಆರ್ ಭತ್ಯೆ ಸೇರಿದಂತೆ ವಿವಿಧ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನಕ್ಕೆ ತಂದು ನಿಮ್ಮ ಪರವಾಗಿ ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದರು.

ವಿಧಾನ ಪರಿಷತ್ ಚುನಾವಣೆ ಸಂದರ್ಭದಲ್ಲಿ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಜಿಲ್ಲೆಯ ನಿರುದ್ಯೋಗ ಯುವಕ ಯುವತಿಯರಿಗೆ ಉದ್ಯೋಗ ಕೊಡಿಸುವ ಭರವಸೆ ನೀಡಿದ್ದೆ, ಜಿಲ್ಲೆಯ ನಿರುದ್ಯೋಗಿಗಳು ನಮ್ಮ ಕಚೇರಿಗೆ ಬಂದು ಉದ್ಯೋಗದ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು. ಎರಡನೇಯದಾಗಿ ಸರ್ಕಾರಿ ನೌಕರರನ್ನು ಒಳಗೊಂಡ ಗೃಹ ನಿರ್ಮಾಣ ಸಂಘ ರಚಿಸಿ ವಸತಿ ಯೋಜನೆಯಡಿ ಮನೆ ನಿರ್ಮಿಸಿ ಕೊಡಲಾಗುವುದು ಎಂದರು. ಕ್ರೀಡಾಕೂಟದಲ್ಲಿ ಭಾಗಿಯಾದ ಎಲ್ಲರಿಗೂ ಶುಭ ಹಾರೈಸಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಮಾತನಾಡಿ ಸರ್ಕಾರ ನೌಕರರ ಬೇಡಿಕೆಗಳ ಈಡೇರಿಕೆಗೆ ನಾವು ಸದಾ ಬದ್ಧ ಈಗಾಗಲೇ 7ನೇ ವೇತನ ಆಯೋಗದ ಜಾರಿಗಾಗಿ ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗಿದ್ದು ಜುಲೈನಲ್ಲಿ ಜಾರಿಯಾಗುವ ಆಶ್ವಾಸನೆ ವ್ಯಕ್ತಪಡಿಸಿದರು. ನೌಕರರ ಸಂಘಟಿತ ಹೋರಾಟದಿಂದ ಯಾವುದೇ ಗುರಿ ಮುಟ್ಟಲು ಸಾಧ್ಯ ಹಾಗಾಗಿ ನಿಮ್ಮೆಲ್ಲರ ಸಹಕಾರ ಅಗತ್ಯ. ಮುಂದಿನ ತಿಂಗಳಲ್ಲಿ ಶಿವಮೊಗ್ಗದಲ್ಲಿ ರಾಜ್ಯ ಮಟ್ಟದ ಕ್ರೀಡಾಕೂಟ ಆಯೋಜಿಸಲಾಗಿದೆ ಜಿಲ್ಲೆಯಲ್ಲಿ ಗೆದ್ದಂತ ಕ್ರೀಡಾಪಟುಗಳು ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಜಯಶೀಲರಾಗಿ ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿ ಎಂದು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಕ್ರೀಡಾಪಟುಗಳಿಗೆ ಅಭಿನಂದನೆ ಸಲ್ಲಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ ಅವರು ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಸರ್ಕಾರಿ ನೌಕರರು ಸಾಕಷ್ಟು ಸಮಯ ಒತ್ತಡದಲ್ಲಿ ಕೆಲಸ ಮಾಡುತ್ತಾರೆ. ಕೆಲಸದ ಜೊತೆಗೆ ಯೋಗ ಮತ್ತು ಕ್ರೀಡೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢ ಪಾರಾಗಬಹುದು. ಕ್ರೀಡೆಯಲ್ಲಿ ಭಾಗವಹಿಸಿ ಬಹುಮಾನ ಪಡೆಯುವದರ ಜೊತೆಗೆ ಹವ್ಯಾಸ ಮಾಡಿಕೊಳ್ಳಬೇಕು ಎಂದು ಹೇಳಿದರು.
ಬೆಂಗಳೂರು ಗ್ರಾಮಾಂತರ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಗಂಗಾಧರ್ ಮಾತನಾಡಿ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಂತೆ, ಜಿಲ್ಲಾಧ್ಯಕ್ಷರ ಸಹಕಾರ,ಸಂಘದ ಸದಸ್ಯರ ಸಹಕಾರದಿಂದ ಬಹಳಷ್ಟು ಅಚ್ಚುಕಟ್ಟಾಗಿ ಜಿಲ್ಲಾಮಟ್ಟದ ನೌಕರರ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದರು. ನಂತರ ಬೆಂಗಳೂರು ನಗರಕ್ಕೆ ಹೊಂದಿಕೊಂಡಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ನೌಕರರಿಗೆ ಮನೆ ಬಾಡಿಗೆ ಭತ್ಯೆ(ಹೆಚ್.ಆರ್.ಎ)ಹೆಚ್ಚಿಸುವಂತೆ ರಾಜ್ಯಾಧ್ಯಕ್ಷರಿಗೆ ಮನವಿ ಮಾಡಿದರು. ಇದಕ್ಕೆ ರಾಜ್ಯಾಧ್ಯಕ್ಷರು ಸಕಾರಾತ್ಮಕವಾಗಿ ಸ್ಪಂದಿಸಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಎನ್ ಅನುರಾಧ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಟಿ.ಜಯಲಕ್ಷ್ಮಿ, ಹೊಸಕೋಟೆ ತಾಲ್ಲೂಕು ತಹಶೀಲ್ದಾರ ಎಂ.ವಿಜಯಕುಮಾರ್, ಜಿಲ್ಲಾಮಟ್ಟದ ಅಧಿಕಾರಿಗಳು, ಬೆಂಗಳೂರು ಗ್ರಾಮಾಂತರ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ಹೆಚ್.ಬಾಲಕೃಷ್ಣ , ಜಿಲ್ಲಾ ಗೌರವಾಧ್ಯಕ್ಷ ಮುನಿಶಾಮಪ್ಪ, ದೊಡ್ಡಬಳ್ಳಾಪುರ ತಾಲ್ಲೂಕು ಅಧ್ಯಕ್ಷ ಲಕ್ಷ್ಮಿ ನರಸಿಂಹಯ್ಯ ಎನ್, ನೆಲಮಂಗಲ ತಾಲ್ಲೂಕು ಅದ್ಯಕ್ಷ ವಾಸುದೇವ ಮೂರ್ತಿ, ಹಿರಿಯ ಉಪಾಧ್ಯಕ್ಷ ರವಿಶಂಕರ್, ಜಿಲ್ಲೆಯ ರಾಜ್ಯ ಸರ್ಕಾರಿ ನೌಕರರ ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ಮುಖಂಡರುಗಳು ಮತ್ತು ಸಾರ್ವಜನಿಕರು ಉಪಸ್ತಿತರಿದ್ದರು.

Leave a Reply

Your email address will not be published. Required fields are marked *

You may have missed