ಸ್ವರ್ಣಗೌರಿ ಹಾಗೂ ಗಣೇಶ ಚತುರ್ಥಿ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಿ ಪಿ.ಒ.ಪಿ ಗಣೇಶ ವಿಗ್ರಹ ಮಾರಾಟ-ಬಳಕೆ ನಿಷೇಧ: ಜಿಲ್ಲಾಧಿಕಾರಿ ಡಾ. ಎನ್ ಶಿವಶಂಕರ್
ಬೆಂಗಳೂರು ಗ್ರಾಮಾಂತರ ಜಿಲ್ಲೆ, ಆಗಸ್ಟ್ 28, 2024ಪರಿಸರ ಮಾಲಿನ್ಯ ಉಂಟುಮಾಡುವ ಪ್ಲಾಸ್ಟರ್ ಆಫ್ ಪ್ಯಾರಿಸ್(ಪಿ.ಒ.ಪಿ) ನಿಂದ ತಯಾರಿಸಿದ ಗಣೇಶ ವಿಗ್ರಹಗಳನ್ನು ಮಾರಾಟ ಮಾಡುವುದು ಹಾಗೂ ಬಳಕೆ ಮಾಡುವುದನ್ನು ನಿಷೇಧಿಸಲಾಗಿದ್ದು, ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಎನ್ ಶಿವಶಂಕರ್ ಅವರು ಹೇಳಿದರು.
ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ನ್ಯಾಯಾಲಯ ಸಭಾಂಗಣದಲ್ಲಿ ಇಂದು ನಡೆದ ಗೌರಿ-ಗಣೇಶ ಹಬ್ಬ ಆಚರಿಸುವ ಸಂಬಂಧ ಪಿ.ಒ.ಪಿ ಗಣೇಶ ನಿಷೇಧಕ್ಕೆ ಸಂಬಂಧಿಸಿದಂತೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗಣೇಶ ವಿಗ್ರಹಗಳು ಈಗಾಗಲೇ ಮಾರುಕಟ್ಟೆ ಪ್ರವೇಶಿಸಿದ್ದು, ಕೃತಕ ವಿಷಪೂರಿತ ಬಣ್ಣ ಬಳಕೆ, ಪ್ಲಾಸ್ಟರ್ ಆಫ್ ಪ್ಯಾರಿಸ್(ಪಿ.ಒ.ಪಿ) ಬಳಸಿ ಗಣೇಶ ವಿಗ್ರಹಗಳು ತಯಾರಿಸಿರುತ್ತಾರೆ. ಅಂತಹ ಗಣೇಶ ವಿಗ್ರಹಗಳನ್ನು ಬಳಸುವುದರಿಂದ ಪರಿಸರ ಮಾಲಿನ್ಯವಾಗುತ್ತದೆ. ಗಣೇಶ ಮೂರ್ತಿಗಳನ್ನು ಮಾರಾಟ ಮಾಡುವ ಮಳಿಗೆಗಳ ಮೇಲೆ ಅಧಿಕಾರಿಗಳು ದಾಳಿ, ಪರಿಶೀಲನೆ ನಡೆಸಿ ಮಾಲಿನ್ಯಕಾರಕ ಪಿ.ಒ.ಪಿ ಗಣೇಶ ಕಂಡುಬಂದಲ್ಲಿ ವಶ ಪಡಿಸಿಕೊಂಡು ಅಂತವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಸಾರ್ವಜನಿಕರು ಕೂಡ ರಾಸಾಯನಿಕ ಬಣ್ಣ ಲೇಪಿತ ಪಿ.ಒ.ಪಿ ಗಣೇಶ ಮೂರ್ತಿಗಳನ್ನು ಬಳಸಬಾರದು. ಗಣೇಶ ಮೂರ್ತಿಯನ್ನು ಕೂರಿಸುವಾಗ ಪರಿಸರ ಸ್ನೇಹಿ ಜೇಡಿಮಣ್ಣಿನಿಂದ ತಯಾರಿಸಿದ
ಗಣೇಶ ಮೂರ್ತಿಗಳನ್ನು ಮಾತ್ರ ಬಳಸಿ. ಗಣೇಶ ವಿಗ್ರಹಗಳನ್ನು ನೈಸರ್ಗಿಕ ಜಲ ಮೂಲಗಳಿಗೆ ವಿಸರ್ಜಿಸುವಾಗ ಸೂಕ್ತ ಮುಂಜಾಗ್ರತಾ ಅಗತ್ಯ. ಸಾಮೂಹಿಕವಾಗಿ ಗುರುತಿಸಿರುವ ಸ್ಥಳಗಳಲ್ಲಿ ವಿಸರ್ಜಿಸುವುದು ಉತ್ತಮ. ಯಾವುದೇ ಅನಾಹುತ-ಹಾನಿ ಸಂಭವಿಸದಂತೆ ಕ್ರಮ ವಹಿಸಿ. ಪಿ.ಒ.ಪಿ ಮೂರ್ತಿಗಳು ನೀರಿನಲ್ಲಿ ಕರಗುವುದಿಲ್ಲ.
ರಾಸಾಯನಿಕ ಬಣ್ಣಗಳು ನೀರಿನಲ್ಲಿ ಕಲುಷಿತಗೊಂಡು ಜೀವ ಸಂಕುಲಕ್ಕೆ ಹಾನಿಯಾಗುತ್ತದೆ. ಹಾಗಾಗಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಬಣ್ಣ ಲೇಪಿತವಾದ ವಿಗ್ರಹಗಳನ್ನು ಜಲ ಮೂಲಗಳಲ್ಲಿ ವಿಸರ್ಜಿಸುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಸಾರ್ವಜನಿಕವಾಗಿ ಗಣೇಶ ಮೂರ್ತಿಗಳನ್ನು ಇಡಲು ಕಡ್ಡಾಯವಾಗಿ ಸ್ಥಳೀಯ ಸಂಸ್ಥೆಗಳು ಮತ್ತು ಪೋಲೀಸ್ ಇಲಾಖೆಯಿಂದ ಅನುಮತಿ ಪಡೆಯಬೇಕು. ಎಲ್ಲ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪಿ.ಒ.ಪಿ ಮತ್ತು ಬಣ್ಣದ ಮೂರ್ತಿಗಳ ತಯಾರಿ ಕಂಡು ಬಂದಲ್ಲಿ ಸಾರ್ವಜನಿಕರು ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬಹುದಾಗಿದೆ.
ಸಾರ್ವಜನಿಕರು ಹಬ್ಬವನ್ನು ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಜಾಗೃತಿ ವಹಿಸಿ, ಪ್ಲಾಸ್ಟಿಕ್ ವಸ್ತುಗಳನ್ನು ಬಳಸದೇ ಪರಿಸರ ಸ್ನೇಹಿಯಾಗಿ ಆಚರಿಸಿ ಎಂದು ಹೇಳಿದರು.
ಸಭೆಯಲ್ಲಿ ಅಪರ ಪೋಲಿಸ್ ವರಿಷ್ಠಾಧಿಕಾರಿ ನಾಗರಾಜ್, ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ದುರ್ಗಶ್ರೀ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ರಾಮಕೃಷ್ಣಯ್ಯ, ದೊಡ್ಡಬಳ್ಳಾಪುರ ವಿಭಾಗದ ಡಿವೈಎಸ್ಪಿ ರವಿ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು, ತಾಲ್ಲೂಕು ತಹಶೀಲ್ದಾರ್ ಗಳು ಉಪಸ್ಥಿತರಿದ್ದರು.