ಸಾಂತ್ವನ ಯೋಜನೆಯಡಿ ದಾಖಲಾಗುವ ಪ್ರಕರಣಗಳನ್ನು ಶೀಘ್ರ ಬಗೆಹರಿಸಿ: ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ.ಅನುರಾಧ ಕೆ.ಎನ್
ಸಾಂತ್ವನ ಯೋಜನೆಯಡಿ ದಾಖಲಾಗುವ ಪ್ರಕರಣಗಳನ್ನು ಶೀಘ್ರ ಬಗೆಹರಿಸಿ: ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ.ಅನುರಾಧ ಕೆ.ಎನ್
ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜುಲೈ 25 .ಸಾಂತ್ವನ ಯೋಜನೆ ಯಡಿ ದಾಖಲಾಗುವ ವರದಕ್ಷಿಣೆ ಕಿರುಕುಳ, ಲೈಂಗಿಕ ಕಿರುಕುಳ, ಕೌಟುಂಬಿಕ ದೌರ್ಜನ್ಯ, ಅತ್ಯಾಚಾರ ಪ್ರಕರಣ, ಮುಂತಾದ ವಿವಿಧ ರೀತಿಯ ದೌರ್ಜನ್ಯ ಪ್ರಕರಣಗಳನ್ನು ಶೀಘ್ರ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳುವಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಅನುರಾಧ ಕೆ.ಎನ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ದೇವನಹಳ್ಳಿ ತಾಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಂತ್ವನ ಕೇಂದ್ರಗಳ ಮೇಲ್ವಿಚಾರಣಾ ಸಮಿತಿ, ಮಹಿಳೆಯರ ಮತ್ತು ಮಕ್ಕಳ ಸಾಗಾಣಿಕೆ ಮತ್ತು ಮಾರಾಟ ನಿಷೇಧ ಸಮಿತಿ, ಬಾಲಭವನ ಸೊಸೈಟಿ ಸಮಿತಿ, ವರದಕ್ಷಿಣೆ ನಿಷೇಧ ಕಾಯ್ದೆ ಅಡಿ ಸಮಿತಿಗಳ ಮೊದಲನೇ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೌರ್ಜನ್ಯಕ್ಕೆ ಒಳಪಟ್ಟ ಮಹಿಳೆಯರಿಗೆ ಕಾನೂನು ಸಲಹೆ, ಆರ್ಥಿಕ ನೆರವು ತಾತ್ಕಾಲಿಕ ಆಶ್ರಯ ರಕ್ಷಣೆ ನೀಡುವುದರ ಜೊತೆಗೆ ಸ್ವಯಂ ಪ್ರೇರಣೆಯಿಂದ ಜೀವಿಸಲು ಅನುಕೂಲವಾಗುವಂತೆ ತರಬೇತಿ ನೀಡಬೇಕು. ಅಂತಹ ಮಹಿಳೆಯರಿಗೆ ಸಮಾಜದಲ್ಲಿ ಇತರ ಮಹಿಳೆಯರಂತೆ ಧೈರ್ಯವಾಗಿ ಬದುಕಲು, ಸಶಕ್ತರನ್ನಾಗಿ ಮಾಡಲು ಸಾಂತ್ವನ ಯೋಜನೆ ಅಡಿ ದಾಖಲಾಗಿರುವ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥ ಪಡಿಸಬೇಕು ಎಂದರು.
ಮಹಿಳೆಯರು ಮತ್ತು ಮಕ್ಕಳ ಸಾಗಾಣಿಕೆಯನ್ನು ನಿರ್ಮೂಲನೆ ಮಾಡುವುದರ ಜೊತೆಗೆ ಸಾಗಾಣೆಗೆ ಒಳಗಾದವರ, ಶೋಷಣೆಗೆ ಒಳಗಾದವರ ರಕ್ಷಣೆ, ಪುನರ್ವಸತಿ, ಕುಟುಂಬಗಳೊಡನೆ ಪುನಃ ವಿಲೀನಗೊಳಿಸುವ ಸಲುವಾಗಿ ಉಜ್ವಲ ಯೋಜನೆ ಯನ್ನು ಜಾರಿಗೆ ತರಲಾಗಿದ್ದು ಈ ಯೋಜನೆ ಅಡಿ ದಾಖಲಾಗಿರುವ ಸಂತ್ರಸ್ತ ಮಹಿಳೆಯರು ಮತ್ತು ಮಕ್ಕಳಿಗೆ ಪುನರ್ವಸತಿ ಕಲ್ಪಿಸಿ, ಮರಳಿ ಮನೆಗೆ ತಲುಪಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಿ ಎಂದು ಹೇಳಿದರು.
ವರದಕ್ಷಿಣೆ ನಿಷೇಧ ಕಾಯ್ದೆಯಡಿ ಜಿಲ್ಲೆಯಲ್ಲಿ 2023 ರ ಏಪ್ರಿಲ್ ರಿಂದ ಜೂನ್ ವರೆಗೆ 14 ಪ್ರಕರಣ ದಾಖಲಾಗಿದ್ದು 01 ಪ್ರಕರಣ ಇತ್ಯರ್ಥವಾಗಿದ್ದು, 13 ಪ್ರಕರಣಗಳಿಗೆ ಎಫ್.ಐ.ಆರ್ ದಾಖಲಾಗಿ ಚಾರ್ಜ್ ಶೀಟ್ ಸಲ್ಲಿಸುವ ಹಂತದಲ್ಲಿದೆ ಇದರ ಬಗ್ಗೆ ವರದಿ ಅನುಸರಿಸಿ ಮಾಹಿತಿ ನೀಡಿ ಎಂದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ನಟರಾಜ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ವಿಜಯೇಂದ್ರ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಪ್ರೇಮ, ಸಮಿತಿಗಳ ಸದಸ್ಯರು ಉಪಸ್ಥಿತರಿದ್ದರು.