ಕೊಯಿರಾ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷೆಯಾಗಿ ಸುಧಾ ಶ್ರೀನಿವಾಸ್. ಉಪಾಧ್ಯಕ್ಷೆಯಾಗಿ ಮಮತಾ ಶಿವಾಜಿಗೌಡ ಆಯ್ಕೆ
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ಕೊಯಿರಾ ಗ್ರಾಮ ಪಂಚಾಯಿತಿ ಆದಾಯ ಮೂಲಗಳಿಲ್ಲದಿದ್ದರು, ಸರ್ಕಾರದಿಂದ ಬರುವ ಅನುದಾನವನ್ನೇ ತೃಪ್ತಿ ಪಟ್ಟುಕೊಂಡು ತಾರತಮ್ಯ ಮಾಡದೆ ಎಲ್ಲ ಗ್ರಾಮಗಳ ಮೂಲಸೌಕರ್ಯಗಳಿಗೆ ಒತ್ತು ನೀಡುತ್ತ ಬಂದಿದ್ದೇವೆಂದು ನೂತನ ಕೊಯಿರಾ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೊಲ್ಲಹಳ್ಳಿ ಸುಧಾಶ್ರೀನಿವಾಸ್ ತಿಳಿಸಿದರು.
ದೇವನಹಳ್ಳಿ ತಾಲ್ಲೂಕಿನ ಕೊಯಿರಾ ಗ್ರಾಮ ಪಂಚಾಯಿತಿ ಕಛೇರಿಯಲ್ಲಿ ನಡೆದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಗಣ್ಯರು ಹಾಗೂ ಮುಖಂಡರಿಂದ ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿ, ನಮ್ಮ ಪಂಚಾಯಿತಿಯಲ್ಲಿ ಒಟ್ಟು 18 ಚುನಾಯಿತ ಸದಸ್ಯರಿದ್ದು, ವಾರ್ಷಿಕ ವರಮಾನ 13 ಲಕ್ಷವಿದೆ. ಪ್ರಧಾನಮಂತ್ರಿ ಅಭಿವೃದ್ದಿ ಯೋಜನೆಗೆ ಕೊಯಿರಾ ಗ್ರಾಮ ಆಯ್ಕೆಗೊಂಡಿದ್ದು ಇದರಿಂದ 20 ಲಕ್ಷರೂ ಪಂಚಾಯಿತಿ ಖಾತೆಗೆ ಜಮಾವಾಗಿದೆ. ಸರ್ವ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲ ಗ್ರಾಮಗಳ ಸರ್ವತೋಮುಖ ಅಭಿವೃದ್ದಿ ಶ್ರಮಿಸುವ ಭರವಸೆ ನೀಡಿದರು.
ಬಿಜೆಪಿ ರೈತ ಮೊರ್ಚಾ ಜಿಲ್ಲಾಧ್ಯಕ್ಷ ಎಚ್‌ಎಂ. ರವಿಕುಮಾರ್ ಮಾತನಾಡಿ, ತಾಲ್ಲೂಕಿನಲ್ಲಿ ಇಲ್ಲಿವರೆಗೆ ಬಿಜೆಪಿಗೆ ಅಧಿಕಾರ ದೊರೆತಿರಲಿಲ್ಲ ಆದರೂ ಕೊಯಿರಾ ಗ್ರಾಮ ಪಂಚಾಯಿತಿ ಅಭಿವೃದ್ದಿಗೆ ಪಕ್ಷತೀತವಾಗಿ ಶ್ರಮಿಸುತ್ತ ಬಂದಿದ್ದೇವೆ. ಬಿಜೆಪಿ ಬೆಂಬಲಿತ ಪ. ಪಂಗಡದ ಮಹಿಳೆ ಸುಧಾಶ್ರೀನಿವಾಸ್ ಅವರಿಗೆ ಅಧ್ಯಕ್ಷ ಸ್ಥಾನ ಒಲಿದಿದೆ. ಸಾಮಾನ್ಯ ಮಹಿಳಾ ಮೀಸಲು ಉಪಾದ್ಯಕ್ಷ ಸ್ಥಾನಕ್ಕೆ ಕಾಂಗ್ರೇಸ್ ಬೆಂಬಲಿತೆ ಮನಗೊಂಡ ಮಮತಾಶಿವಾಜೀಗೌಡ ಅವರು ಆಯ್ಕೆಗೊಂಡಿದ್ದಾರೆ. ತಾಲ್ಲೂಕಿನಲ್ಲಿ ಮೊಟ್ಟ ಮೊದಲ ಬಾರಿಗೆ ಅಧಿಕಾರದ ಗದ್ದುಗೆ ಏರಿದ್ದು ಸಂತಸ ತಂದಿದೆ ಎಂದರು.
ಪಂಚಾಯಿತಿ ಚುನಾವಣಾದಿಕಾರಿ ರವೀಂದ್ರಸಿಂಗ್ ಮಾತನಾಡಿ, ಕೊಯಿರಾ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಗೊಲ್ಲಹಳ್ಳಿ ಸುಧಾಶ್ರೀನಿವಾಸ್ ನಾಮಪತ್ರ ಸಲ್ಲಿಸಿದ್ದು ಉಳಿದವರಿಂದ ನಿಗದಿತ ಅವಧಿಯೊಳಗೆ ನಾಮಪತ್ರ ಸಲ್ಲಿಕೆಯಾಗದ ಕಾರಣದಿಂದ ಸುಧಾಶ್ರೀನಿವಾಸ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಗೊಂಡಿರುತ್ತಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಎರಡು ನಾಮಪತ್ರ ಸಲ್ಲಿಸಿದ್ದು, ಮನಗೊಂಡನಹಳ್ಳಿ ಮಮತ ಶಿವಾಜೀಗೌಡ 10 ಮತಗಳು, ಕೆ.ಹೂಸೂರು ವೀಣಾ ರವಿಕುಮಾರ್ 8ಮತಗಳನ್ನು ಪಡೆದುಕೊಂಡಿದ್ದು ಇವರ ಚುನಾವಣೆಯಲ್ಲಿ ಮಮತಶಿವಾಜೀಗೌಡ ಅವರನ್ನು ಉಪಾಧ್ಯಕ್ಷರನ್ನಾಗಿ ಅಧಿಕೃತವಾಗಿ ಘೋಷಿಸಲಾಗಿರುತ್ತದೆ. ಶಾಂತಿ, ಸೌಹರ್ದಯುತವಾಗಿ ಚುನಾವಣೆ ಪ್ರಕ್ರಿಯೆ ನಡೆದಿದೆ ಎಂದು ತಿಳಿಸಿದರು.
ಪಂಚಾಯಿತಿ ಉಪಾಧ್ಯಕ್ಷೆ ಮನಗೊಂಡನಹಳ್ಳಿ ಎಚ್.ಮಮತಶಿವಾಜೀಗೌಡ ಮಾತನಾಡಿ ನರೇಗಾ ಯೋಜನೆ ಅಡಿ ಕಳೆದ ವರ್ಷ 50 ಲಕ್ಷ ವೆಚ್ಚದಲ್ಲಿ ಅಭಿವೃದ್ದಿ ಕೆಲಸಗಳಾಗಿದ್ದವು. 2023-24 ನೇ ಸಾಲಿನಲ್ಲಿ ಪ್ರತಿ ಗ್ರಾಮಗಳಲ್ಲಿ ರಸ್ತೆ, ಚರಂಡಿ, ಶಾಲಾ, ಕಾಲೇಜು, ರಾಜ ಕಾಲುವೆ, ಆರೋಗ್ಯ ಕೇಂದ್ರ, ಪಶು ಆಸ್ಪತ್ರೆ ಮುಂತಾದ ಸರ್ಕಾರಿ ಕಟ್ಟಡಗಳ ನಿರ್ಮಾಣ ಕಾಮಗಾರಿಗಳು ಸುಮಾರು 65 ಲಕ್ಷ ರೂ ವೆಚ್ಚದಲ್ಲಿ ಅಭಿವೃದ್ದಿ ಗೊಂಡಿವೆ. ಗ್ರಾಮಸ್ಥರು ಹಾಗೂ ಸರ್ವ ಸದಸ್ಯರು ಕೊಟ್ಟಿರುವ ಅಧಿಕಾರವನ್ನು ಸುದುಪಯೋಗ ಪಡಿಸಿಕೊಂಡು ಗ್ರಾಮೀಣ ಭಾಗದ ಎಲ್ಲ ವರ್ಗದವರ ಅಭಿವೃದ್ದಿಗೆ ಶ್ರದ್ದೆವಹಿಸಿ ಕೆಲಸ ಮಾಡುವೆ ಎಂದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಶಾಂತಕುಮಾರ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಪ್ರಸನ್ ಕುಮಾರ್, ನೂತನ ಪಂಚಾಯಿತಿ ಉಪಾದ್ಯಕ್ಷೆ ಮನಗೊಂಡನಹಳ್ಳಿ ಎಚ್. ಮಮತಶಿವಾಜೀಗೌಡ, ನಿಕಟಪೂರ್ವ ಅಧ್ಯಕ್ಷೆ ಆಂಜಿನಮ್ಮ, ಉಪಾಧ್ಯಕ್ಷ ಮುನಿ ಆಂಜಿನಪ್ಪ, ಸದಸ್ಯರಾದ ವೀಣಾ ಎಚ್.ಎಂ.ರವಿಕುಮಾರ್, ರಮೇಶ್ ಬಾಬು. ರಮ್ಯ, ಆನಂದ್, ಮುನೀಂದ್ರ, ನಯನ, ಜಗದೀಶ್, ರಾಜಾರಾಮ್, ಬಿಂದು, ಶಿಲ್ಪ, ನಳಿನ, ಸಂಕೇತ್, ಜೆಡಿಎಸ್ ಮುಖಂಡ ಜಗದೀಶ್, ಬಿಜೆಪಿ ಮುಖಂಡರಾದ ನಾಗರಾಜು, ಇನ್ನಿತರರು ಹಾಜರಿದ್ದರು