ಹೊಸಕೋಟೆಯಲ್ಲಿ ಜನಸ್ಪಂದನಾ ಕಾರ್ಯಕ್ರಮ 245 ಅಹವಾಲುಗಳ ಸ್ವೀಕಾರ ಸಾರ್ವಜನಿಕರ ಮನೆ ಬಾಗಿಲಿಗೆ ಸೌಲಭ್ಯ ತಲುಪಿಸುವುದು ಸರ್ಕಾರದ ಉದ್ದೇಶ:ಶಾಸಕ ಶರತ್ ಬಚ್ಚೇಗೌಡ
ಬೆಂಗಳೂರು ಗ್ರಾಮಾಂತರ ಜಿಲ್ಲೆ, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ, ಸರ್ಕಾರದ ಸೌಲಭ್ಯಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಹೊಸಕೋಟೆ ತಾಲ್ಲೂಕು ಶಾಸಕರು ಮತ್ತು ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶರತ್ ಕುಮಾರ್ ಬಚ್ಚೇಗೌಡ ಅವರು ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕು ಆಡಳಿತ ಮತ್ತು ತಾಲ್ಲೂಕು ಪಂಚಾಯಿತಿಯ ಸಂಯುಕ್ತ ಆಶ್ರಯದಲ್ಲಿ ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆಯ ‘ರೇಷ್ಮೆ ಬೆಳೆಗಾರರ ಸೇವಾ ಸಹಕಾರ ಸಂಘದ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ‘ಜನಸ್ಪಂದನಾ ಕಾರ್ಯಕ್ರಮ’ದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾರ್ವಜನಿಕರು ಸಮಸ್ಯೆಗಳನ್ನು ಹೊತ್ತು ಪ್ರತಿನಿತ್ಯ ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಹಾಗೂ ಜನರ ಬಳಿಗೆ ಸರ್ಕಾರವನ್ನು ಕಳುಹಿಸಿ ಪ್ರಜೆಗಳ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸಿ ಸ್ಥಳದಲ್ಲಿಯೇ ಪರಿಹರಿಸುವ ನಿಟ್ಟಿನಲ್ಲಿ ಕ್ರಮ ವಹಿಸುವುದು ಜನಸ್ಪಂದನ ಕಾರ್ಯಕ್ರಮದ ಉದ್ದೇಶವಾಗಿದೆ. ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹ ಜ್ಯೋತಿ, ಶಕ್ತಿ ಯೋಜನೆ, ಯುವ ನಿಧಿ ಯೋಜನೆಗಳಿಂದ ಯಾವುದೇ ಮಧ್ಯವರ್ತಿಗಳ ಕಮಿಶನ್ ಹಾವಳಿ ಇಲ್ಲದೆ ನೇರವಾಗಿ ಮನೆ ಮನೆಗೆ ಸೌಲಭ್ಯ ತಲುಪುತ್ತಿದೆ.
ರಾಜ್ಯ ಮಟ್ಟದಲ್ಲಿ ಹೇಗೆ ಜನಸ್ಪಂದನ ಕಾರ್ಯಕ್ರಮ ನಡೆಯುತ್ತಿದೆಯೋ ಹಾಗೆ ತಾಲ್ಲೂಕು ಮಟ್ಟದಲ್ಲಿ ನಡೆಯುತ್ತಿದೆ. ಪ್ರಜೆಗಳ ಸೇವೆ ಮಾಡುವ ದೃಷ್ಟಿಯಿಂದ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಕಾರ್ಯಕ್ರಮದ ಜೊತೆಗೆ ಸಾಗುವಳಿ ಚೀಟಿ ವಿತರಣೆ, ಪಿಂಚಣಿ ಸೌಲಭ್ಯ, ಅಂಗವಿಕಲರ ಸಾಮಾಗ್ರಿಗಳನ್ನು ಸಹ ವಿತರಣೆ ಮಾಡಲಾಗುತ್ತಿದೆ.
ಕಂದಾಯ ಇಲಾಖೆಯ ಒತ್ತುವರಿ ಸಮಸ್ಯೆ, ಖಾತೆ ಸಮಸ್ಯೆ, ಸಾಗುವಳಿ ಚೀಟಿ ಮುಂತಾದ ಹಲವು ಸಮಸ್ಯೆಗಳಿಗೆ ಕಾನೂನಿನ ಚೌಕಟ್ಟಿನಲ್ಲಿ ಬಗೆಹರಿಸಲಾಗುವುದು ಎಂದು ಶಾಸಕರು ಹೇಳಿದರು.
ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ್ ಅವರು ಮಾತನಾಡಿ ಜನರು ಅಧಿಕಾರಿಗಳನ್ನು ಹುಡುಕಿಕೊಂಡು ಹೋಗುವ ಬದಲಾಗಿ ಅಧಿಕಾರಿಗಳೇ ಜನರ ಬಳಿ ಬಂದು ಸಮಸ್ಯೆ ಆಲಿಸುತ್ತಾರೆ. ಸಾರ್ವಜನಿಕರು ಸಲ್ಲಿಸಿದ ಅಹವಾಲುಗಳನ್ನು ನಿಗದಿತ ಕಾಲ ಮಿತಿಯೊಳಗೆ ವಿಲೇವಾರಿ ಮಾಡಲಾಗುವುದು.
ಪ್ರತಿ ತಿಂಗಳು ತಾಲ್ಲೂಕು ಹೋಬಳಿ ಮಟ್ಟದಲ್ಲಿ ಜನ ಸಂಪರ್ಕ ಸಭೆ ಮಾಡಲಾಗುವುದು. ಜೂನ್ ಸಂಪರ್ಕ ಸಭೆಗಳಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ.ಎನ್ ಅನುರಾಧ ಅವರು ಮಾತನಾಡಿ ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಹಿಡಿದು ತಾಲ್ಲೂಕು ಮಟ್ಟದ ಅಧಿಕಾರಿಗಳು ಹೋಬಳಿ ಮಟ್ಟದ ಅಧಿಕಾರಿಗಳು ಒಂದೇ ವೇದಿಕೆಯಲ್ಲಿ ಜನರ ಬಳಿ ಬಂದು ಅಹವಾಲು ಸ್ವೀಕಾರ ಮಾಡುವುದೇ ಜನಸ್ಪಂದನ. ಸಾರ್ವಜನಿಕರು ಸಲ್ಲಿಸಿರುವ ಅಹವಾಲುಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲಾಗುವುದು ಎಂದರು.
ನಂತರ ಸೂಲಿಬೆಲೆ ಹೋಬಳಿ ವ್ಯಾಪ್ತಿಯಲ್ಲಿನ 29 ಫಲಾನುಭವಿಗಳಿಗೆ ಸಾಗುವಳಿ ಚೀಟಿ ವಿತರಣೆ, 175 ಫಲಾನುಭವಿಗಳಿಗೆ ಪಿಂಚಣಿ, ಶೇಕಡ 75 ರಷ್ಟು ಅಂಗ ವೈಫಲ್ಯ ಹೊಂದಿರುವ ಅಂಗವಿಕಲರಿಗೆ ಸರ್ಕಾರಿ ಸೌಲಭ್ಯಕ್ಕಾಗಿ ಶಾಸಕರು ಹಕ್ಕು ಪತ್ರ ವಿತರಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಉಪವಿಭಾಗಾಧಿಕಾರಿ ಶ್ರೀನಿವಾಸ್, ಹೊಸಕೋಟೆ ತಹಶೀಲ್ದಾರ್ ವಿಜಯ್ ಕುಮಾರ್, ಕಾರ್ಯನಿರ್ವಾಹಕ ಅಧಿಕಾರಿ ನಾರಾಯಣಸ್ವಾಮಿ, ಹೊಸಕೋಟೆ ವಿಭಾಗದ ಡಿವೈಎಸ್ಪಿ ಶಂಕರ್ ಗೌಡ ಅಣ್ಣಾ ಸಾಹೇಬ್ ಪಾಟೀಲ್, ಸೂಲಿಬೆಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಜನಾರ್ದನ ರೆಡ್ಡಿ, ಉಪಾಧ್ಯಕ್ಷರು, ಸ್ಥಳೀಯ ಜನಪ್ರತಿನಿಧಿಗಳು, ಜಿಲ್ಲಾ & ತಾಲ್ಲೂಕು ಮಟ್ಟದ ಅಧಿಕಾರಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.