ಎ.ಸೀತಾರಾಮ್ ರವರ ಸ್ವಾರತ್ಯತ್ವದಲ್ಲಿ ಮೂಡಿಬರುತ್ತಿರುವ "ಸುವರ್ಣ ಲೇಖನಿ"ಹಾಗು "ನ್ಯೂಸ್ ಕರ್ನಾಟಕ1"

ಸುದ್ಧಿ ಹಾಗು ಜಾಹಿರಾತಕ್ಕೆ ಸಂರ್ಪಕಿಸಿ +91 8553310400

ರೈತರಿಗೆ ಸಮರ್ಪಕ ಬಿತ್ತನೆ ಬೀಜ, ಗೊಬ್ಬರ ಪೂರೈಸಿ: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸಲ್ಮಾ ಕೆ ಫಾಹಿಂ

ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮುಂಗಾರು ಮಳೆ ಆರಂಭವಾಗಿದ್ದು, ರೈತರು ಕೃಷಿ ಚಟುವಟಿಕೆಗಳನ್ನು ಆರಂಭಿಸಿದ್ದಾರೆ, ರೈತರಿಗೆ ಸಮರ್ಪಕ ಬಿತ್ತನೆ ಬೀಜ ಹಾಗೂ ಗೊಬ್ಬರ ಪೂರೈಸಲು ಅಗತ್ಯ ಕ್ರಮ ವಹಿಸಿ ಎಂದು ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ಉಸ್ತುವಾರಿ ಕಾರ್ಯದರ್ಶಿ ಸಲ್ಮಾ.ಕೆ ಫಾಹಿಂ ಅವರು ಅಧಿಕಾರಿಗಳಿಗೆ ಸೂಚಿಸಿದರು.


ದೇವನಹಳ್ಳಿ ತಾಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯತ ಕಚೇರಿ ಸಭಾಂಗಣದಲ್ಲಿಂದು ನಡೆದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಸ್ತುತ ಜನವರಿ 01 ರಿಂದ 09 ರ ವರೆಗೆ 173 ಮಿ.ಮೀ ವಾಡಿಕೆ ಮಳೆಗೆ 236 ಮಿ.ಮೀ ಮಳೆಯಾಗಿದೆ. ಜೂನ್ ಮಾಹೆಯಲ್ಲಿ 31 ಮಿ.ಮೀ ಮಳೆಗೆ 85 ಮಿ.ಮೀ ರಷ್ಟು ಮಳೆಯಾಗಿದೆ. ಮುಂಗಾರು ಹಂಗಾಮಿಗೆ ಒಟ್ಟು 2179 ಕ್ವಿಂಟಾಲ್ ಬಿತ್ತನೆ ಬೀಜ ವಿತರಿಸುವ ಗುರಿ ಹೊಂದಲಾಗಿದ್ದು. ಈ ವರೆಗೆ 222.23 ಕ್ವಿಂಟಾಲ್ ರಾಗಿ, 2.35 ಕ್ವಿಂಟಾಲ್ ತೊಗರಿ, 2.15 ಕ್ವಿಂಟಾಲ್ ಅಲಸಂದೆ, 11.02 ಕ್ವಿಂಟಾಲ್ ಮುಸುಕಿನ ಜೋಳದ ಬಿತ್ತನೆ ಬೀಜ ರೈತರಿಗೆ ವಿತರಿಸಲಾಗಿದೆ ಎಂದು ಕೃಷಿ ಆಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಜಿಲ್ಲೆಯಲ್ಲಿ ಮುಂಗಾರು ಮಳೆ ಉತ್ತಮವಾಗಿ ಆಗುತ್ತಿದೆ. ಕೃಷಿ, ತೋಟಗಾರಿಕೆ ಬೆಳೆಗಳಿಗೆ ಸಂಬಂಧಿಸಿದಂತೆ ರೈತರು ಈಗಾಗಲೇ ಕೃಷಿ ಚಟುವಟಿಕೆಗಳನ್ನು ಆರಂಭಿಸಿದ್ದು ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆಯಲ್ಲಿ ಕೊರತೆಯಾಗದಂತೆ ರೈತ ಸಂಪರ್ಕ ಕೇಂದ್ರಗಳಲ್ಲಿ ಅಗತ್ಯ ದಾಸ್ತಾನು ಶೇಖರಿಸಿಡಿ ಎಂದರು.


ಅನ್ನ ಭಾಗ್ಯ ಯೋಜನೆ ಅಡಿ ಜಿಲ್ಲೆಯಲ್ಲಿ 2,29,390 ಫಲಾನುಭವಿಗಳಿದ್ದು ಅದರಲ್ಲಿ 2,09,389 ಫಲಾನುಭವಿಗಳಿಗೆ 12,19,37,430 ರೂ.ಗಳು ಏಪ್ರಿಲ್ ಮಾಹೆಯಲ್ಲಿ ಜಮೆಯಾಗಿದೆ. ಆಧಾರ್ ಕಾರ್ಡ್ ಇ- ಕೆವೈಸಿ ಸಮಸ್ಯೆ ಹಾಗೂ ಇನ್ನಿತರ ಕಾರಣಗಳಿಂದ ಇತರೆ ಅರ್ಹ ಫಲಾನುಭವಿಗಳು ಸೌಲಭ್ಯ ವಂಚಿತರಾಗುತ್ತಿದ್ದಾರೆ. ಅಂತಹ ಫಲಾನುಭವಿಗಳನ್ನು ಗುರ್ತಿಸಿ ಸಮಸ್ಯೆ ಬಗೆಹರಿಸಲು ಕ್ರಮ ವಹಿಸಿ ಎಂದರು.
ಜಿಲ್ಲೆಯಲ್ಲಿ ಗೃಹಜ್ಯೋತಿ ಯೋಜನೆ ಅಡಿ 3,57,122 ಕುಟುಂಬಗಳು 200 ಯೂನಿಟ್ ಗಿಂತ ಕಡಿಮೆ ವಿದ್ಯುತ್ ಬಳಸುವವರಿದ್ದಾರೆ ಅವರಲ್ಲಿ 3,16,054 ಕುಟುಂಬಗಳು ಗೃಹಜ್ಯೋತಿಗೆ ನೋಂದಾಯಿಸಿಕೊಂಡಿದ್ದಾರೆ.

344 ಕೋಟಿ ಗೃಹಲಕ್ಷ್ಮಿ ಹಣ ಜಮೆ: ಗೃಹ ಲಕ್ಷ್ಮಿ ಯೋಜನೆ ಆರಂಭವಾದ ದಿನದಿಂದ ಇಲ್ಲಿಯವರೆಗೂ ಜಿಲ್ಲೆಯಲ್ಲಿ 17,39,675 ಫಲಾನುಭವಿಗಳಿಗೆ 3,44,10,60,000 ರೂಗಳು ಹಣ ವರ್ಗಾಯಿಸಲಾಗಿದೆ. ಮೇ ಮಾಹೆಯವರೆಗೆ 2,03,184 ಫಲಾನುಭವಿಗಳು ನೋಂದಣಿ ಆಗಿದ್ದು ಮೇ ಮಾಹೆಯಲ್ಲಿ 40,63,68,000 ರೂ.ಗಳು ಫಲಾನುಭವಿಗಳ ಖಾತೆಗೆ ಜಮೆಯಾಗಿದೆ. ಬಾಕಿ ಇರುವ ಫಲಾನುಭವಿಗಳಿಗೆ ಗ್ರಾಮಮಟ್ಟದಲ್ಲಿ ಪ್ರಚಾರ ಮಾಡಿ, ಜಾಗೃತಿ ಮೂಡಿಸಿ ನೋಂದಾಯಿಸಿಕೊಳ್ಳಲು ಕ್ರಮವಹಿಸಿ ಎಂದರಲ್ಲದೆ ಗೃಹಲಕ್ಷ್ಮೀ ಯೋಜನೆಗೆ ನೋಂದಾಯಿಸುವ ಕೇಂದ್ರಗಳಿಗೆ ಭೇಟಿ ನೀಡಿ ನೋಂದಾವಣೆ ಪ್ರಕ್ರಿಯೆಯನ್ನು ಪರಿಶೀಲಿಸಿ ಎಂದು ಹೇಳಿದರು.


ಯುವ ನಿಧಿ ಯೋಜನೆಯಡಿ 2094 ಅರ್ಜಿಗಳು ಸ್ವೀಕೃತ ವಾಗಿದ್ದು ಮೇ ಅಂತ್ಯಕ್ಕೆ 912 ಅರ್ಹ ನಿರುದ್ಯೋಗ ಪದವೀಧರಿಗೆ ನಿರುದ್ಯೋಗ ಭತ್ಯೆ ಪಾವತಿಸಲಾಗಿದೆ.
ವಸತಿ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿ ಜಿಲ್ಲೆಯಲ್ಲಿ ವಸತಿ ರಹಿತ ಹಾಗೂ ನಿವೇಶನ ರಹಿತ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಿ ವರದಿ ನೀಡಿ, ಈಗಾಗಲೇ ವಿವಿಧ ವಸತಿ ಯೋಜನೆಗಳಡಿ ಕಾರ್ಯಾರಂಭಗೊಂಡಿರುವ ಮನೆಗಳನ್ನು ಶೀಘ್ರ ಪೂರ್ಣಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಗಂಗಾ ಕಲ್ಯಾಣ ಯೋಜನೆಯಡಿ ವಿವಿಧ ನಿಗಮಗಳಲ್ಲಿ ಬಾಕಿ ಇರುವ ಫಲಾನುಭವಿಗಳ ಆಯ್ಕೆಗೆ ಸಂಬಂಧಿಸಿದಂತೆ ತ್ವರಿತವಾಗಿ ಶಾಸಕರಿಂದ ಆಯ್ಕೆ ಪಟ್ಟಿ ಪಡೆದು ನಿರ್ದಿಷ್ಟ ಗುರಿ ತಲುಪಲು ಕ್ರಮ ವಹಿಸಿ ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಡಾ.ಅನುರಾಧ ಕೆ.ಎನ್, ಅಪರ ಜಿಲ್ಲಾಧಿಕಾರಿ ಅಮರೇಶ್ ಹೆಚ್, ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಶ್ರೀನಿವಾಸ ಎಂ, ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ರಮೇಶ್ ಸೇರಿದಂತೆ ಜಿಲ್ಲಾಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಸಭೆಯ ನಂತರ ಜಿಲ್ಲಾಡಳಿತ ಭವನದಲ್ಲಿ ಇರುವ ಶಿಶುಪಾಲನಾ ಕೇಂದ್ರಕ್ಕೆ ಉಸ್ತುವಾರಿ ಕಾರ್ಯದರ್ಶಿ ಸಲ್ಮಾ ಕೆ ಫಾಹಿಂ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು

Leave a Reply

Your email address will not be published. Required fields are marked *

You may have missed