ಎ.ಸೀತಾರಾಮ್ ರವರ ಸ್ವಾರತ್ಯತ್ವದಲ್ಲಿ ಮೂಡಿಬರುತ್ತಿರುವ "ಸುವರ್ಣ ಲೇಖನಿ"ಹಾಗು "ನ್ಯೂಸ್ ಕರ್ನಾಟಕ1"

ಸುದ್ಧಿ ಹಾಗು ಜಾಹಿರಾತಕ್ಕೆ ಸಂರ್ಪಕಿಸಿ +91 8553310400

ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2024 ದೋಷರಹಿತ ಮತದಾರರ ಪಟ್ಟಿ ತಯಾರಿಸಿ:ಸಲ್ಮಾ ಕೆ ಫಾಹಿಂ

ಬೆಂಗಳೂರು ಗ್ರಾಮಾಂತರ ಜಿಲ್ಲೆ ನವೆಂಬರ್ 17.ಮತದಾನದ ಹಕ್ಕಿನಿಂದ ಯಾವೊಬ್ಬ ನಾಗರಿಕನೂ ವಂಚಿತರಾಗದಂತೆ ನೋಡಿಕೊಳ್ಳುವುದು ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದ ಉದ್ದೇಶವಾಗಿದೆ.

ಯಾವುದೇ ಲೋಪಗಳಿಗೆ ಅವಕಾಶ ನೀಡದಂತೆ ಅಧಿಕಾರಿ-ಸಿಬ್ಬಂದಿ ಜವಾಬ್ದಾರಿಯುತವಾಗಿ ಪಾರದರ್ಶಕ ಹಾಗೂ ದೋಷರಹಿತ ಮತದಾರರ ಪಟ್ಟಿ ತಯಾರಿಸಬೇಕು ಎಂದು ಪಶುಸಂಗೋಪನಾ ಮೀನುಗಾರಿಕೆ ಇಲಾಖೆ ಕಾರ್ಯದರ್ಶಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿಯ ಆಡಳಿತಾಧಿಕಾರಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದ ವೀಕ್ಷಕರಾದ ಸಲ್ಮಾ ಕೆ ಫಾಹಿಂ ಅವರು ತಿಳಿಸಿದರು.


ದೇವನಹಳ್ಳಿ ತಾಲ್ಲೂಕು ಬೀರಸಂದ್ರ ಗ್ರಾಮದ ಜಿಲ್ಲಾಡಳಿತ ಭವನದಲ್ಲಿಂದು ನಡೆದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2024 ಸಂಬಂಧಿಸಿದಂತೆ ಮತದಾನ ಪಟ್ಟಿ ತಯಾರಿಕೆ ಹಾಗೂ ಸಂಬಂಧಿತ ಕಾರ್ಯಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಭಾಗವಾಗಿ ಜಿಲ್ಲೆಯಾದ್ಯಂತ ನಡೆಯುತ್ತಿರುವ ಮನೆ ಮನೆ ಸಮೀಕ್ಷೆ ಕಾರ್ಯವನ್ನು ಪರಿಶೀಲಿಸಿದ ಅವರು ಹೊಸ ಮತದಾರರ ಸೇರ್ಪಡೆ, ತಿದ್ದುಪಡಿ, ಮತದಾರರ ಪಟ್ಟಿಗೆ ಆಧಾರ್ ಜೋಡಣೆ, ಹೆಸರು ತೆಗೆದು ಹಾಕಲು ಅನುಸರಿಸುತ್ತಿರುವ ಕ್ರಮಗಳನ್ನು ಪರಿಶೀಲಿಸಿದರು‌. ಮನೆ ಮನೆ ಭೇಟಿ ಸಂದರ್ಭದಲ್ಲಿ ಅರ್ಹ ಮತದಾರರು ಪಟ್ಟಿಯಲ್ಲಿ ಇರುವುದನ್ನು ನಿರಂತರವಾಗಿ ಮರು ಪರಿಶೀಲನೆ ಮಾಡುತ್ತಿರಬೇಕು‌ ಎಂದು ತಿಳಿಸಿ ಅಗತ್ಯ ಸಲಹೆ, ಸೂಚನೆ ನೀಡಿದರು.


ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯ ಉತ್ತಮವಾಗಿ ನಡೆಯುತ್ತಿದೆ.
ನವ ಮತದಾರರನ್ನು ನೋಂದಣಿ ಮಾಡಲು ಕಾಲೇಜು ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಜಿಲ್ಲೆಯ ಸ್ವೀಪ್ ಸಮಿತಿ ವತಿಯಿಂದ ಹಮ್ಮಿಕೊಳ್ಳಬೇಕು ಎಂದು ಹೇಳಿದರು.


ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಜನ್ಮ ದಿನಾಂಕ ದಾಖಲೆಗಳನ್ನು ಪಡೆಯುವಾಗ ಸಮರ್ಪಕವಾಗಿ ಪರಿಶೀಲಿಸಬೇಕು. ಜಿಲ್ಲೆಯ ಗಣ್ಯರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಬಿಟ್ಟುಹೋಗದಂತೆ ಎಚ್ಚರವಹಿಸಬೇಕು.
2024 ರ ಜನವರಿ ಮಾಹೆಯಲ್ಲಿ ಪ್ರಕಟಿಸಲಾಗುವ ಜಿಲ್ಲೆಯ ಅಂತಿಮ ಕರಡು ಮತದಾರರ ಪಟ್ಟಿಯಲ್ಲಿ ಯಾವುದೇ ಲೋಪದೋಷಗಳು ಇಲ್ಲದಂತೆ ತಯಾರಿಸಿ ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.


ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ನೋಂದಾಯಿಸಲು ಬಂದಿರುವ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಿ ಮಾತದಾರ ಕಾರ್ಡ್ ಅನ್ನು ಅರ್ಹ ಮತದಾರರಿಗೆ ತಲುಪಿಸಿ, ತಿರಸ್ಕರಿಸಿದ ಅರ್ಜಿಗಳನ್ನು ಮರುಪರಿಶೀಲಿಸಿ ಅರ್ಜಿದಾರರಿಗೆ ಸೂಕ್ತ ದಾಖಲೆ ಸಲ್ಲಿಸುವಂತೆ ನಿರ್ದೇಶನ ನೀಡಿ ಎಂದು ಹೇಳಿದರು.


ಜಿಲ್ಲಾಧಿಕಾರಿ ಡಾ. ಎನ್. ಶಿವಶಂಕರ ಅವರು ಮಾತನಾಡಿ, ಚುನಾವಣಾ ಆಯೋಗದಿಂದ ಇತ್ತೀಚಿನ ನಿರ್ದೇಶನದಂತೆ ಮತದಾರರ ನೋಂದಣಿಗಾಗಿ ಸರಳೀಕರಿಸಿದ ನಮೂನೆ-6 ರ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳನ್ನು ಸಲ್ಲಿಸಲು ಹಾಗೂ ಒಂದೇ ತರಹದ ಹೆಸರು / ಭಾವಚಿತ್ರ ನಮೂದುಗಳನ್ನು ಹೊಂದಿರುವ ಮತದಾರರ ಪರಿಶೀಲನೆಗೆ ಮತ್ತು ಕೈಬಿಡಲು ಪರಿಷ್ಕೃತ ನಮೂನೆ-7ನ್ನು ನೀಡಲು ಅವಕಾಶ ಕಲ್ಪಿಸಲಾಗಿದೆ. ಮತದಾರರ ಪಟ್ಟಿಯ ಹೆಸರು, ಇನ್ನಿತರ ತಿದ್ದುಪಡಿಗಳಿಗಾಗಿ ನಮೂನೆ-8ರ ಅರ್ಜಿಯಲ್ಲಿ ಸಲ್ಲಿಸಬಹುದಾಗಿದೆ.


8.81 ಲಕ್ಷ ಮತದಾರರು
ಜಿಲ್ಲೆಯಲ್ಲಿ ಈಗ ಪ್ರಕಟಿಸಲಾಗಿರುವ ಕರಡು ಮತದಾರರ ಪಟ್ಟಿಯಲ್ಲಿ ಜಿಲ್ಲೆಯ ನಾಲ್ಕು ತಾಲೂಕುಗಳಿಂದ 8,81,961 ಮತದಾರರು ಇದ್ದಾರೆ. ಇದರಲ್ಲಿ 4,37,579 ಪುರುಷರು, 4,44,237 ಮಹಿಳೆಯರು ಹಾಗೂ 145 ಜನ ಇತರೆ ಮತದಾರರು ಇದ್ದಾರೆ. ಒಟ್ಟು ಮತದಾರರ ಸಂಖ್ಯೆಯಲ್ಲಿ 80 ವರ್ಷ ಮೇಲ್ಪಟ್ಟ ಮತದಾರರು 20,144. ಅಂಗವಿಕಲ ಮತದಾರರು 12,624 ಹಾಗೂ ಸೇವಾ ಮತದಾರರು 128 ಇದ್ದಾರೆ ಎಂದರು.


ಜಿಲ್ಲೆಯ 4 ತಾಲೂಕುಗಳಲ್ಲಿನ ಮತದಾರರ ಪೈಕಿ ಹೆಚ್ಚಿನ ಪ್ರಮಾಣದಲ್ಲಿ ಮಹಿಳಾ ಮತದಾರರೇ ಇದ್ದಾರೆ. ದೊಡ್ಡಬಳ್ಳಾಪುರದಲ್ಲಿ ಒಟ್ಟು 2,15,282 ಮತದಾರರಿದ್ದು, ಅದರಲ್ಲಿ 1,08,248 ಮಹಿಳಾ ಮತದಾರರು ಹಾಗೂ 1,07,033 ಪುರುಷ ಮತದಾರರಿದ್ದಾರೆ. ಹೊಸಕೋಟೆಯಲ್ಲಿ ಒಟ್ಟು 2,34,936 ಮತದಾರರಿದ್ದು, ಅದರಲ್ಲಿ 1,18,224 ಮಹಿಳೆ ಹಾಗೂ 1,16, 681 ಪುರುಷ ಮತದಾರರು ಇದ್ದಾರೆ. ದೇವನಹಳ್ಳಿಯಲ್ಲಿ ಒಟ್ಟು 2,13,381 ಮತದಾರರಿದ್ದು, 1,07,345 ಮಹಿಳಾ ಹಾಗೂ 1,06,018 ಪುರುಷ ಮತದಾರರಿದ್ದಾರೆ. ನೆಲಮಂಗಲದಲ್ಲಿ 2,18,372 ಮತದಾರರ ಪೈಕಿ 1,10,420 ಮಹಿಳೆ ಹಾಗೂ 1,07,847 ಪುರುಷ ಮತದಾರರಿದ್ದಾರೆ.


ಜಿಲ್ಲೆಯಲ್ಲಿ ಮತದಾರರ ಲಿಂಗಾನುಪಾತದಲ್ಲಿ 1 ಸಾವಿರ ಪುರುಷರಿಗೆ 1016 ಮಹಿಳೆಯರಿದ್ದಾರೆ. ಅದರಲ್ಲಿ ದೊಡ್ಡಬಳ್ಳಾಪುರದಲ್ಲಿ 1011, ಹೊಸಕೋಟೆಯಲ್ಲಿ 1013, ದೇವನಹಳ್ಳಿ 1013 ಹಾಗೂ ನೆಲಮಂಗಲದಲ್ಲಿ ಅತಿ ಹೆಚ್ಚು 1025 ಲಿಂಗಾನುಪಾತ ಕಂಡುಬಂದಿದೆ.
ಜಿಲ್ಲೆಯಲ್ಲಿ 4 ವಿಧಾನಸಭಾ ಕ್ಷೇತ್ರಗಳಿವೆ. ಇದರಲ್ಲಿ ಒಟ್ಟಾಗಿ 1137 ಮತಗಟ್ಟೆಗಳಿವೆ. ಅದರಲ್ಲಿ ದೊಡ್ಡಬಳ್ಳಾಪುರ 276, ಹೊಸಕೋಟೆ 293, ದೇವನಹಳ್ಳಿ 292 ಹಾಗೂ ನೆಲಮಂಗಲ್ಲಿ 276 ಮತಗಟ್ಟೆಗಳಿದೆ.
12,624 ವಿಶೇಷಚೇತನ ಮತದಾರರು,
ಜಿಲ್ಲೆಯಲ್ಲಿ ದೊಡ್ಡಬಳ್ಳಾಪುರ 3350, ಹೊಸಕೋಟೆ 3482, ದೇವನಹಳ್ಳಿ 3484 ಹಾಗೂ ನೆಲಮಂಗಲದಲ್ಲಿ 2308 ಸೇರಿದಂತೆ ಒಟ್ಟು 12,624 ಮಂದಿ ವಿಶೇಷಚೇತನ ಮತದಾರರಿದ್ದಾರೆ. ಜತೆಗೆ 20,144 ಮಂದಿ 80 ವರ್ಷ ಮೇಲ್ಪಟ್ಟವರಿದ್ದಾರೆ. ಇನ್ನು ಸೇವಾ ಮತದಾರರು 128 ಮಂದಿ ಇದ್ದಾರೆ ಎಂದು ಮಾಹಿತಿ ನೀಡಿದರು.


ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಅನುರಾಧ ಕೆ.ಎನ್ ಅವರು ಮಾತನಾಡಿ ಜಿಲ್ಲೆಯಲ್ಲಿ ಯುವ ಮತದಾರರ ನೋಂದಣಿ ಮಾಡಿಸಲು ಸ್ವೀಪ್ ಚಟುವಟಿಕೆಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ತಾಲ್ಲೂಕು ಮಟ್ಟದಲ್ಲಿ ಹೆಚ್ಚು ಸ್ವೀಪ್ ಕಾರ್ಯಕ್ರಮಗಳನ್ನು ನಡೆಸಿ ಜಾಗೃತಿ ಮೂಡಿಸಲಾಗುವುದು. ಕಾಲೇಜುಗಳಲ್ಲಿ ವಿವಿಧ ರೀತಿಯ ಸ್ಪರ್ಧೆಗಳನ್ನು ಎರ್ಪಡಸಿ ಜಾಗೃತಿ ಮೂಡಿಸಿ ಯುವ ಮತದಾರರನ್ನು ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಲು ಪ್ರೇರೆಪಿಸಲಾಗುವುದು ಎಂದು ಮಾಹಿತಿ ನೀಡಿದರು.


ಸಭೆಯಲ್ಲಿ ಉಪವಿಭಾಗಾಧಿಕಾರಿ ಶ್ರೀನಿವಾಸ, ದೊಡ್ಡಬಳ್ಳಾಪುರ ತಾಲ್ಲೂಕಿನ ತಹಸೀಲ್ದಾರ್ ವಿದ್ಯಾ ವಿಭಾ ರಾಥೋಡ್, ಹೊಸಕೋಟೆ ‌ತಾಲ್ಲೂಕು ತಹಸೀಲ್ದಾರ್ ವಿಜಯ್ ಕುಮಾರ್, ದೇವನಹಳ್ಳಿ ತಾಲ್ಲೂಕು ತಹಸೀಲ್ದಾರ್ ಶಿವರಾಜ್, ನೆಲಮಂಗಲ ತಾಲ್ಲೂಕು ತಹಸೀಲ್ದಾರ್ ಅರುಂಧತಿ, ದೊಡ್ಡಬಳ್ಳಾಪುರ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಮುನಿರಾಜು, ನೆಲಮಂಗಲ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಮಧು, ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.


ಸಭೆಯ ನಂತರ ಜಿಲ್ಲಾ ಮತದಾರರ ಪಟ್ಟಿ ವೀಕ್ಷಕರಾದ ಸಲ್ಮಾ ಕೆ ಫಾಹಿಂ ಅವರು ಆಲೂರು ದುದ್ದನಹಳ್ಳಿಯ ಮನೆ ಮನೆಗೆ ಭೇಟಿ ನೀಡಿ ಮತಪಟ್ಟಿ ಪರಿಷ್ಕರಣೆ ಕಾರ್ಯ ಪರಿಶೀಲಿಸಿ ಮಾಹಿತಿ ಪಡೆದರು.
ನಂತರ ಜಿಲ್ಲಾಧಿಕಾರಿಯವರ ನ್ಯಾಯಾಲಯ ಸಭಾಂಗಣದಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಸಂಬಂಧ ಸಭೆ ನಡೆಸಿ ಪ್ರತಿಯೊಬ್ಬ ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಕೊಳ್ಳುವಂತೆ ಸಹಕರಿಸಿ ಎಂದರು.


1950 ರಾಜ್ಯದ ಸಹಾಯವಾಣಿ ಕೇಂದ್ರ ಹಾಗೂ 080-22375040 ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಹಾಯವಾಣಿ ಕೇಂದ್ರ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿದ ವೀಕ್ಷಕರು, ದಿನವೊಂದಕ್ಕೆ ಸರಾಸರಿ 03 ದೂರುಗಳು ಬಂದಿದ್ದು ತಕ್ಷಣ ಸಮಸ್ಯೆಗೆ ಸ್ಪಂದಿಸಿ, ಇತ್ಯರ್ಥಪಡಿಸುತ್ತಿರುವುದು ತೃಪ್ತಿಕರವಾಗಿದೆ ಎಂದು ಹೇಳಿದರು.


Leave a Reply

Your email address will not be published. Required fields are marked *

You may have missed