ಎ.ಸೀತಾರಾಮ್ ರವರ ಸ್ವಾರತ್ಯತ್ವದಲ್ಲಿ ಮೂಡಿಬರುತ್ತಿರುವ "ಸುವರ್ಣ ಲೇಖನಿ"ಹಾಗು "ನ್ಯೂಸ್ ಕರ್ನಾಟಕ1"

ಸುದ್ಧಿ ಹಾಗು ಜಾಹಿರಾತಕ್ಕೆ ಸಂರ್ಪಕಿಸಿ +91 8553310400

ಜೂನ್ 27 ರಂದು ದೇವನಹಳ್ಳಿ ಅಂಬೇಡ್ಕರ್ ಭವನದಲ್ಲಿ ಕೆಂಪೇಗೌಡ ಜಯಂತಿ ಆಚರಣೆ

ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ. ಶಿವಶಂಕರ.ಎನ್ ಸೂಚನೆ

ಬೆಂಗಳೂರು ಗ್ರಾಮಾಂತರ ಜಿಲ್ಲೆ, ಬೆಂಗಳೂರಿನ ನಿರ್ಮಾತೃ, ನಾಡಪ್ರಭು ಕೆಂಪೇಗೌಡ ಜಯಂತಿ ಅಂಗವಾಗಿ ಜೂನ್ 27 ರಂದು ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ದೇವನಹಳ್ಳಿ ಪಟ್ಟಣದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಅರ್ಥಪೂರ್ಣವಾಗಿ ಆಚರಿಸಲು ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ. ಶಿವಶಂಕರ.ಎನ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಕೆಂಪೇಗೌಡ ಜಯಂತಿ ಆಚರಣೆಯ ಪೂರ್ವಭಾವಿ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದೇವನಹಳ್ಳಿಯ ಶ್ರೀ ವೇಣು ಗೋಪಾಲಸ್ವಾಮಿ ದೇವಸ್ಥಾನದಿಂದ ಅಂಬೇಡ್ಕರ್ ಭವನದವರೆಗೆ ಕಲಾತಂಡಗಳ ಮೆರವಣಿಗೆಯೊಂದಿಗೆ ಕೆಂಪೇಗೌಡ ಅವರ ಭಾವಚಿತ್ರ ಹೊತ್ತ ರಥ ಸಂಚರಿಸಲಿದ್ದು, ವೇದಿಕೆ ಕಾರ್ಯಕ್ರಮದಲ್ಲಿ ನಾಡಪ್ರಭು ಕೆಂಪೇಗೌಡರ ವಿಚಾರಧಾರೆಗಳು, ಜೀವನ ಚರಿತ್ರೆ ಕುರಿತ ಉಪನ್ಯಾಸ ನಡೆಯಲಿದೆ ಎಂದು ತಿಳಿಸಿದರು.

ಶಿಷ್ಟಾಚಾರದಂತೆ ಉಸ್ತುವಾರಿ ಸಚಿವರು ಸೇರಿದಂತೆ ಇತರೆ ಜನಪ್ರತಿನಿಧಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲು ಅಧಿಕಾರಿಗಳು ಕ್ರಮ ವಹಿಸಬೇಕೆಂದು ತಿಳಿಸಿದರಲ್ಲದೆ, ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ವೇದಿಕೆ ವ್ಯವಸ್ಥೆ, ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆ ಸೇರಿದಂತೆ ಅಗತ್ಯ ಸೌಲಭ್ಯಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ಕಲಾ ತಂಡಗಳ ವ್ಯವಸ್ಥೆಯನ್ನು ಮಾಡುವಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ಜಿಲ್ಲಾ ಹಾಗೂ ದೇವನಹಳ್ಳಿ ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಜಿಲ್ಲೆಯ ರೈತ ಬಾಂಧವರು, ಸಂಘ-ಸಂಸ್ಥೆಗಳ, ಸಮುದಾಯದ ಮುಖಂಡರು, ಪದಾಧಿಕಾರಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಮರೇಶ್.ಹೆಚ್, ದೊಡ್ಡಬಳ್ಳಾಪುರ ಉಪ ವಿಭಾಗಾಧಿಕಾರಿ ಎಂ.ಶ್ರೀನಿವಾಸ್, ದೇವನಹಳ್ಳಿ ತಹಶೀಲ್ದಾರ್ ಶಿವರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You may have missed