ಯುವಜನತೆಗೆ ಉತ್ತಮ ಉದ್ಯೋಗಾವಕಾಶಗಳು ಕಲ್ಪಿಸಲು ಉದ್ಯೋಗಮೇಳ ಸಹಕಾರಿ
ಯುವಜನತೆಗೆ ಉತ್ತಮ ಉದ್ಯೋಗಾವಕಾಶಗಳು ಕಲ್ಪಿಸಲು ಉದ್ಯೋಗಮೇಳ ಸಹಕಾರಿ
ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜುಲೈ 19 ,ಜಿಲ್ಲೆಯಲ್ಲಿ ಯುವಜನತೆಗೆ ಉತ್ತಮ ಉದ್ಯೋಗ ಆವಕಾಶ ಕಲ್ಪಿಸಲು ವಿಶ್ವ ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ ವತಿಯಿಂದ ಎಸ್.ಎ.ಪಿ ಲ್ಯಾಬ್-ಕೋಡ್ ಉನ್ನತಿ ಯೋಜನೆಯಡಿ ಉದ್ಯೋಗ ಮೇಳ ನಡೆಸುತ್ತಿರುವುದು ಶ್ಲಾಘನೀಯ ಎಂದು ದೊಡ್ಡಬಳ್ಳಾಪುರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಸದಾಶಿವ ರಾಮಚಂದ್ರಗೌಡ ಅಭಿಪ್ರಾಯ ಪಟ್ಟರು.
ದೊಡ್ಡಬಳ್ಳಾಪುರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವ ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ ಮತ್ತು ಕೌಶಲ್ಯಾಭಿವೃಧ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮತ್ತು ಎಸ್.ಎ.ಪಿ ಲ್ಯಾಬ್-ಕೋಡ್ ಉನ್ನತಿ ಯೋಜನೆ ವತಿಯಿಂದ ಆಯೋಜಿಸಿದ್ದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು ಗ್ರಾಮೀಣ ಯುವಜನರಿಗೆ ಉದ್ಯೋಗ ಅವಕಾಶಗಳು ಕಲ್ಪಿಸುವುದರಿಂದ ದೇಶದ ಆರ್ಥಿಕತೆ ಮತ್ತು ಪ್ರಗತಿ ಏಕಕಾಲದಲ್ಲಿ ಸಾಧಿಸಬಹುದಾಗಿದೆ ಎಂದರು.
ಯುವಜನರು ಅವಕಾಶ ವಂಚಿತರಾಗದೆ ಸದುಪಯೋಗ ಪಡೆಸಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮ ಆಯೋಜಕರಾದ ವಿಶ್ವ ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ ಸಂಯೋಜಕ ನಿಶಾಂತ್ ಚವ್ಹಾಣ್ ಮಾತನಾಡಿ ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃದ್ಧಿ ಪಡಿಸಿ ಅವರ ಪ್ರತಿಭೆಗೆ ತಕ್ಕಂತೆ ಉದ್ಯೋಗಾವಕಾಶ ಕಲ್ಪಿಸುವುದು ನಮ್ಮ ಯೋಜನೆಯ ಧ್ಯೇಯ ಎಂದರು, ಉದ್ಯೋಗ ಮೇಳದಲ್ಲಿ ಉತ್ತಮ ವೇತನ ನೀಡುವ ಕಂಪನಿಗಳು ಭಾಗವಹಿಸಿದ್ದು ಸಂತಸ ತಂದಿದೆ ಎಲ್ಲಾ ಕಂಪನಿಗಳಗೂ ತಕ್ಷಣ ಉದ್ಯೋಗಿಗಳು ಬೇಕಿದ್ದು ಅವರೇ ತರಬೇತಿ ನೀಡಿ ಕೆಲಸ ನೀಡುವ ಗುರಿ ಹೊಂದಿದ್ದಾರೆ. ಈಗಾಗಲೇ ಕಳೆದ ಮೂರು ವರ್ಷಗಳಿಂದ ಕೋಡ್ ಉನ್ನತಿ ಯೋಜನೆಯು ಜಿಲ್ಲೆಯಲ್ಲಿ ಅನುಷ್ಟಾನಗೊಳ್ಳುತ್ತಿದ್ದು ಯುವಜನರಿಗೆ ಉತ್ತಮ ಉದ್ಯೋಗಿಗಳಾಗಲು ಅವಶ್ಯವಿರುವ ಕೌಶಲ್ಯಗಳು ಮತ್ತು ವೃತ್ತಿ ಮಾರ್ಗದರ್ಶನ ನಿಡಲಾಗುತ್ತಿದ್ದು ಈ ಯೋಜನೆಯಡಿ ತರಬೇತಿ ಪಡೆದ ವಿದ್ಯಾರ್ಥಿಗಳು ಉದ್ಯೋಗಮೇಳದಲ್ಲಿ ಪಾಲ್ಗೊಂಡು ಉತ್ತಮ ಉದ್ಯೋಗಾವಕಾಶಗಳನ್ನು ಪಡೆಯುವುದರೊಂದಿಗೆ ಈ ಯೋಜನೆಯ ಆಶಯವು ಯಶಸ್ವಿಯಾಗುವುದೆಂದು ತಿಳಿಸಿದರು.
ವಿಶ್ವ ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ ಯೋಜನೆಯ ಸಮುದಾಯ ಸಂಯೋಜಕ ಪ್ರವೀಣ್ ಕುಮಾರ್ ಮಾತನಾಡಿ ಪ್ರತಿಯೊಬ್ಬರಿಗೂ ಉದ್ಯೋಗದ ಮತ್ತು ಭವಿಷ್ಯದ ಕನಸು ಇರುತ್ತದೆ. ಇದಕ್ಕೆ ಪೂರಕವೆಂಬಂತೆ ಉತ್ತಮ ರೀತಿಯಲ್ಲಿ ಉದ್ಯೋಗಕಾಂಕ್ಷಿಗಳು ತಯಾರಿ ನಡೆಸಿದರೆ ಅತ್ಯುತ್ತಮ ಹುದ್ದೆ ಅಲಂಕರಿಸಬಹುದಾಗಿದೆ ಎಂದರು. ಈ ಉದ್ಯೋಗ ಮೇಳದಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕಿನ ವಿವಿಧ ಕಾಲೇಜುಗಳಿಂದ ಸುಮಾರು 300 ಕ್ಕೂ ಹೆಚ್ಚು ಅಂತಿಮ ವರ್ಷದ ವಿದ್ಯಾರ್ಥಿಗಳು ಮತ್ತು ಪದವೀಧರ ಉದ್ಯೋಗಕಾಂಕ್ಷಿಗಳು ಪಾಲ್ಗೊಂಡಿದ್ದರು. ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದ ಉದ್ಯೋಗದಾತ ಕಂಪನಿಯ ಪ್ರತಿನಿಧಿಗಳು ತಮ್ಮ ಸಂಸ್ಥೆಯ ಬಗ್ಗೆ ಹಾಗೂ ಅವರಲ್ಲಿರುವ ಉದ್ಯೋಗಾವಕಾಶಗಳು, ವೇತನ ಮತ್ತು ಇತರೆ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ಲೇಸ್ಮೆಂಟ್ ಅಧಿಕಾರಿ ಸಿದ್ದರಾಮರಾಜು, ಪ್ರಾಧ್ಯಪಕರಾದ ನಾಗರಾಜು, ಯು.ಎನ್.ಡಿ.ಪಿ ಸಿಬ್ಬಂದಿ ಆಮೀರ್ ಹಸನ್, ಸವೆಂತ್ ಸಂಸ್ಥೆಯ ತರಬೇತಿದಾರರಾದ ಸಂಜಯ್, ಮಹಂತ್ ಹಾಗೂ ವಿವಿಧ ಕಂಪನಿಗಳ ಪ್ರತಿನಿಧಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.