ಸಾಕ್ಷರತೆಯ ಕಾರ್ಯಕ್ರಮ ಮನೆ, ಗ್ರಾಮಗಳಿಂದ ಪ್ರಾರಂಭವಾಗಬೇಕು: ಜಿಪಂ ಉಪ ಕಾರ್ಯದರ್ಶಿ ರಮೇಶ್
ಸಾಕ್ಷರತೆಯ ಕಾರ್ಯಕ್ರಮ ಮನೆ, ಗ್ರಾಮಗಳಿಂದ ಪ್ರಾರಂಭವಾಗಬೇಕು: ಜಿಪಂ ಉಪ ಕಾರ್ಯದರ್ಶಿ ರಮೇಶ್
ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜುಲೈ 14 ಬೆಂಗಳೂರಿಗೆ ಹೊಂದಿಕೊಂಡಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅನಕ್ಷರಸ್ಥರ ಸಂಖ್ಯೆ ಹೆಚ್ಚಾಗಿಯೇ ಇದೆ. ಇದನ್ನು ಸರಿಪಡಿಸಲು ನಾವೆಲ್ಲರೂ ಒಗ್ಗೂಡಿ, ನಾವು ಕಲಿಯುವುದರ ಜೊತೆಗೆ ನಮ್ಮ ಕುಟುಂಬಕ್ಕೂ ಸಹ ಸಾಕ್ಷರತೆಗೆ ದಾರಿ ಮಾಡಿಕೊಡಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ರಮೇಶ್ ಹೆಳಿದರು.
ದೊಡ್ಡಬಳ್ಳಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಜಿಲ್ಲಾಡಳಿತ,
ಜಿಲ್ಲಾ ಪಂಚಾಯತ್, ಜಿಲ್ಲಾ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ವತಿಯಿಂದ 2022-23 ನೇ ಸಾಲಿನ ಸಾವಿರ ಗ್ರಾಮ ಪಂಚಾಯತಿ ಸಂಪೂರ್ಣ ಸಾಕ್ಷರತಾ ಕಾರ್ಯಕ್ರಮದಡಿಯಲ್ಲಿ ವಾತಾವರಣ ನಿರ್ಮಾಣ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪುಸ್ತಕ, ಪತ್ರಿಕೆಗಳನ್ನು ಓದುವುದರಿಂದ ಹೆಚ್ಚು ವಿಚಾರಗಳನ್ನು, ಪ್ರಸಕ್ತ ವಿದ್ಯಮಾನಗಳನ್ನು ತಿಳಿದುಕೊಳ್ಳಬಹುದು. ಮಹಿಳಾ ಸಾಕ್ಷರತೆಗೂ ಸಹ ಒತ್ತು ನೀಡಬೇಕೆಂದು ಅವರು ಹೇಳಿದರು.
ಸಾಕ್ಷರತೆಯನ್ನು ಯಶಸ್ವಿಯಾಗಿ ಸಾಧಿಸಲು ಹೆಚ್ಚು ಪ್ರಚಾರದ ಅಗತ್ಯವಿದೆ. ಗ್ರಾಮ ಪಂಚಾಯತಿ, ಅಂಗನವಾಡಿಗಳು, ಸ್ತ್ರೀ ಶಕ್ತಿ ಹಾಗೂ ಸ್ವ ಸಹಾಯ ಸಂಘಗಳ ಸಹಭಾಗಿತ್ವದಿಂದ ಸಾವಿರ ಸಾಕ್ಷರತೆಯ ಕಾರ್ಯಕ್ರಮ ಸಂಪೂರ್ಣ ಯಶಸ್ವಿಗೊಳಿಸಬೇಕು ಎಂದು ದೊಡ್ಡಬಳ್ಳಾಪುರ ತಹಶೀಲ್ದಾರ್ ಮೊಹನ ಕುಮಾರಿ ಅವರು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಶಿಕ್ಷಣಾಧಿಕಾರಿ ಶ್ರೀಕಂಠ, ಜಿಲ್ಲಾ ಡಯಟ್ ಜಂಟಿ ನಿರ್ದೇಶಕ ಶಿವಮಲ್ಲಪ್ಪ, ಉಪ ನಿರ್ದೇಶಕಿ ಉಷಾ ಕುಮಾರಿ, ಡಿ.ಎಸ್.ಇ.ಆರ್.ಟಿ ಯ ಸಹಾಯಕ ನಿರ್ದೇಶಕ ದೊರೆ ರಾಜು, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಶಶಿಕುಮಾರ್, ನಿವೃತ್ತ ಶಿಕ್ಷಣಾಧಿಕಾರಿ ಹನುಮಂತಪ್ಪ, ಕಾಲೇಜಿನ ಉಪ ಪ್ರಾಂಶುಪಾಲರ ನೀರಜ, ರಂಗಮನೆ ತಂಡ, ಕಾಲೇಜು ವಿದ್ಯಾರ್ಥಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.