ಎ.ಸೀತಾರಾಮ್ ರವರ ಸ್ವಾರತ್ಯತ್ವದಲ್ಲಿ ಮೂಡಿಬರುತ್ತಿರುವ "ಸುವರ್ಣ ಲೇಖನಿ"ಹಾಗು "ನ್ಯೂಸ್ ಕರ್ನಾಟಕ1"

ಸುದ್ಧಿ ಹಾಗು ಜಾಹಿರಾತಕ್ಕೆ ಸಂರ್ಪಕಿಸಿ +91 8553310400

ಜೂನ್ 12 ರಂದು ವಿಶ್ವ ಬಾಲ ಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆಗೆ ಅಗತ್ಯ ಸಿದ್ಧತೆ ಕೈಗೊಳ್ಳಿ: ಜಿಲ್ಲಾಧಿಕಾರಿ ಆರ್.ಲತಾ

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ “ವಿಶ್ವ ಬಾಲ ಕಾರ್ಮಿಕ ಪದ್ದತಿಯ ವಿರೋಧಿ ದಿನಾಚರಣೆ”ಯನ್ನು 2023ರ ಜೂನ್ 12 ರಂದು ದೇವನಹಳ್ಳಿ ಟೌನ್‌ನ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಅರ್ಥಪೂರ್ಣವಾಗಿ ಆಚರಿಸಲು ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಆರ್.ಲತಾ ಅವರು ತಿಳಿಸಿದರು.

ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿಂದು ನಡೆದ ವಿಶ್ವ ಬಾಲ ಕಾರ್ಮಿಕ ಪದ್ದತಿಯ ವಿರೋಧಿ ದಿನಾಚರಣೆ ಪೂರ್ವಭಾವಿ ಸಿದ್ಧತಾ ಸಭೆ ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಜಿಲ್ಲಾ ಮಟ್ಟದ ಕಾರ್ಯಕಾರಿ ಮತ್ತು ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

2023ರ ಜೂನ್ 12 ರಂದು ಬೆಳಿಗ್ಗೆ 9:30 ಗಂಟೆಗೆ ದೇವನಹಳ್ಳಿ ಟೌನ್‌ನ ತಾಲ್ಲೂಕು ಕಛೇರಿಯಿಂದ ಡಾ.ಬಿ.ಆರ್ ಅಂಬೇಡ್ಕರ್ ಭವನದವರೆಗೆ ಶಾಲಾ ವಿದ್ಯಾರ್ಥಿಗಳಿಂದ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ನಂತರ ಬೆಳಿಗ್ಗೆ 11.00 ಗಂಟೆಗೆ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ವೇದಿಕೆ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಮತಿತ್ತರು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರಲ್ಲದೆ ಯಾವುದೇ ರೀತಿಯ ಅಡೆತಡೆಗಳು ಉಂಟಾಗದಂತೆ ನೋಡಿಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಕಾರ್ಯಕ್ರಮದಲ್ಲಿ ಬಾಲಕಾರ್ಮಿಕ ವಿಶೇಷ ತರಬೇತಿ ಕೇಂದ್ರದಲ್ಲಿ ವ್ಯಾಸಂಗ ಮಾಡಿ ನಂತರ ಮುಖ್ಯವಾಹಿನಿ ಶಾಲೆಯಲ್ಲಿ ದಾಖಲಾಗಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ. 70ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಿ ಸನ್ಮಾನಿಸಲಾಗುವುದು ಎಂದು ತಿಳಿಸಿದರಲ್ಲದೆ ಅನಿರೀಕ್ಷಿತ ತಪಾಸಣೆ ಮತ್ತು ದಾಳಿಯಲ್ಲಿ ಕಂಡುಬಂದ ಪರಿಶಿಷ್ಟ ಜಾತಿ ಹಾಗೂ ಪಂಗಡದ ಮಕ್ಕಳಿಗೆ ಎಸ್.ಸಿ ಎಸ್.ಪಿ ಮತ್ತು ಟಿ.ಎಸ್.ಪಿ ಯೋಜನೆಯಡಿ ಶೈಕ್ಷಣಿಕ ಸಾಮಗ್ರಿಗಳನ್ನು ಮತ್ತು ಅವರ ಕುಟುಂಬ ವರ್ಗದವರಿಗೆ ಆಹಾರ ಕಿಟ್‌ಗಳನ್ನು ನೀಡಲಾಗುವುದು. ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ಪ್ರೌಢ ಶಾಲೆಗಳಲ್ಲಿ ಬಾಲಕಾರ್ಮಿಕ ಪದ್ದತಿಯ ನಿರ್ಮೂಲನೆ ಬಗ್ಗೆ ಚರ್ಚಾ ಮತ್ತು ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸಿ ತಾಲ್ಲೂಕುವಾರು ಪ್ರಥಮ, ದ್ವಿತೀಯ ಮತ್ತು ತೃತೀಯ ವಿಜೇತರಿಗೆ ಬಹುಮಾನ ವಿತರಿಸಲಾಗುವುದು ಎಂದರು.

ಬಾಲಕಾರ್ಮಿಕರನ್ನು ರಕ್ಷಿಸಲು ಅನಿರೀಕ್ಷಿತ ದಾಳಿಗಳನ್ನು ಹೆಚ್ಚಿಸಲು ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಆರ್.ಲತಾ ಸೂಚನೆ
ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕರನ್ನು ಪತ್ತೆಮಾಡಿ ಪುನರ್ವಸತಿ ಕಲ್ಪಿಸಲು ತಾಲ್ಲೂಕು ಮಟ್ಟದಲ್ಲಿ ಟಾಸ್ಕ್ ಫೋರ್ಸ್‌ ಸಮಿತಿಗಳನ್ನು ರಚಿಸಲಾಗಿದ್ದು, ತಾಲ್ಲೂಕು ಮಟ್ಟದಲ್ಲಿ ತಹಸೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆಗಳನ್ನು ಕಡ್ಡಾಯವಾಗಿ ನಡೆಸಬೇಕು ಎಂದರಲ್ಲದೆ ಬೆಂಗಳೂರು ನಗರ ಜಿಲ್ಲೆಗೆ ಹೊಂದಿಕೊಂಡಿರುವ ಬೆಂಗಳೂರು

ಗ್ರಾಮಾಂತರ ಜಿಲ್ಲೆಯಲ್ಲಿ ಕೈಗಾರಿಕೆಗಳು, ವಾಣಿಜ್ಯ ಸಂಸ್ಥೆಗಳು, ಅಂಗಡಿ ಮುಂಗಟ್ಟುಗಳು ಹೆಚ್ಚಾಗಿರುವುದರಿಂದ, ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಪೊಲೀಸ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಶಿಕ್ಷಣ ಇಲಾಖೆ ಸೇರಿದಂತೆ ಒಟ್ಟು 11 ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಕಡ್ಡಾಯವಾಗಿ ಅನಿರೀಕ್ಷಿತ ದಾಳಿ,ತಪಾಸಣೆ ನಡೆಸಿ ಬಾಲಕಾರ್ಮಿಕರನ್ನು ರಕ್ಷಿಸಲು ಕಾರ್ಮಿಕ ಇಲಾಖೆಗೆ ಸಹಕರಿಸುವಂತೆ ಹಾಗೂ ರಕ್ಷಿಸಿದ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಿ ಶಾಲೆಗೆ ದಾಖಲು ಮಾಡುವ ಮೂಲಕ ಬಾಲಕಾರ್ಮಿಕ ಪದ್ದತಿಯನ್ನು ನಿರ್ಮೂಲನೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಬಾಲಕಾರ್ಮಿಕರನ್ನು ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದ್ದು 14 ವರ್ಷದೊಳಗಿನ ಯಾವುದೇ ಮಕ್ಕಳನ್ನು ಯಾವುದೇ ಕ್ಷೇತ್ರದಲ್ಲಿ ಹಾಗೂ 18 ವರ್ಷದೊಳಗಿನ ಮಕ್ಕಳನ್ನು ಅಪಾಯಕಾರಿ ಕ್ಷೇತ್ರದಲ್ಲಿ ದುಡಿಸಿದಲ್ಲಿ ಅಂತಹವರಿಗೆ ಕನಿಷ್ಠ 06 ತಿಂಗಳಿಗಿಂತ ಕಡಿಮೆ ಇಲ್ಲದಂತೆ ಮತ್ತು ಗರಿಷ್ಠ 02 ವರ್ಷದವರೆಗೂ ಜೈಲು ಶಿಕ್ಷೆ ಹಾಗೂ ರೂ. 20,000/- ಗಳಿಗಿಂತ ಕಡಿಮೆ ಇಲ್ಲದಂತೆ ಮತ್ತು ರೂ. 50,000/- ಗಳ ವರೆಗೆ ಹೆಚ್ಚಿಸಬಹುದಾದಂತಹ ದಂಡ ಅಥವಾ ಎರಡನ್ನು ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ತಿಳಿಸಿದರು.

ಅನಿರೀಕ್ಷಿತ ತಪಾಸಣೆ ಮತ್ತು ದಾಳಿಯ ವೇಳೆ ವಿವಿಧ ಅಂಗಡಿಗಳು, ಗ್ಯಾರೇಜುಗಳು, ಬೇಕರಿಗಳು, ಚಿಕನ್ ಮತ್ತು ಮಟನ್ ಅಂಗಡಿಗಳು ಹಾಗೂ ವಿವಿಧ ವಾಣಿಜ್ಯ ಸಂಸ್ಥೆಗಳ ಮಾಲೀಕರಿಗೆ, ಸಾರ್ವಜನಿಕರಿಗೆ ಹಾಗೂ ಶಾಲಾ-ಕಾಲೇಜುಗಳಲ್ಲಿ ಬಾಲ್ಯಾವಸ್ಥೆ ಮತ್ತು ಕಿಶೋರಾವಸ್ಥೆ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ಹಾಗೂ ತಿದ್ದುಪಡಿ ಕಾಯ್ದೆ 2016ರ ಕುರಿತು ಕಾನೂನು ಅರಿವು-ನೆರವು ಕಾರ್ಯಕ್ರಮಗಳನ್ನು, ಆಟೊ ಪ್ರಚಾರ ಕಾರ್ಯಕ್ರಮಗಳನ್ನು, ಬೀದಿ ನಾಟಕಗಳನ್ನು, ಗೋಡೆ ಬರಹಗಳನ್ನು, ಕರಪತ್ರವನ್ನು ಮತ್ತು ಭಿತ್ತಿಪತ್ರಗಳನ್ನು, ಅಂಗಡಿಗಳ ಮಾಲೀಕರಿಗೆ ವಿತರಿಸುವ ಮೂಲಕ ಇನ್ನು ಮುಂದೆ ತಮ್ಮ ಸುತ್ತಮುತ್ತಲಿನಲ್ಲಿ ಯಾವುದೇ ಮಕ್ಕಳನ್ನು ನೇಮಿಸಿ ಕೊಂಡಿರುವುದು ಕಂಡುಬಂದಲ್ಲಿ ತಕ್ಷಣವೇ ಮಕ್ಕಳ ಸಹಾಯವಾಣಿ 1098 ಮತ್ತು ಪೊಲೀಸ್ ಇಲಾಖೆಯ ಸಹಾಯವಾಣಿ ಸಂಖ್ಯೆ 112 ಕ್ಕೆ ಕರೆ ಮಾಡುವುದರ ಮೂಲಕ ಮಕ್ಕಳನ್ನು ರಕ್ಷಣೆ ಮಾಡಲು ಸಾರ್ವಜನಿಕರು ಸಹಕಾರ ನೀಡಬೇಕೆಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ನಾಗೇಂದ್ರ. ಹೆಚ್.ಆರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ನಟರಾಜ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕ ಶ್ರೀಕಂಠ.ಎನ್, ದೇವನಹಳ್ಳಿ ತಹಸೀಲ್ದಾರ್ ಶಿವರಾಜ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಹಾಯಕ ನಿರ್ದೇಶಕಿ ಹೇಮಾವತಿ.ಜೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕ ಸುಬ್ಬರಾವ್.ಎಸ್ ಸೇರಿದಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು, ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು, ನಾಲ್ಕು ತಾಲ್ಲೂಕಿನ ಕಾರ್ಮಿಕ ನಿರೀಕ್ಷಕರು ಸೇರಿದಂತೆ ಮತ್ತಿತರು ಹಾಜರಿದ್ದರು.

Leave a Reply

Your email address will not be published. Required fields are marked *

You may have missed