ಬೆಂಗಳೂರು ವಿಶ್ವವಿದ್ಯಾಲಯ ಸಂವಹನ ವಿಭಾಗ ಸುವರ್ಣ ಮಹೋತ್ಸವ: ಮೀಡಿಯಾ ಸ್ಪಿಯರ್-2024 ರಾಷ್ಟ್ರೀಯ ಸಮ್ಮೇಳನ ಆಯೋಜನೆ
ಮಾಧ್ಯಮ ಜ್ಞಾನ ಕುರಿತು ಹೊಸ ಕೋರ್ಸ್ ಸೇರ್ಪಡೆಗೆ ಕ್ರಮ: ಪ್ರೊ. ಎಸ್.ಆರ್.ನಿರಂಜನ ಅಭಿಮತ
ಬೆಂಗಳೂರು ಗ್ರಾಮಾಂತರ ಜಿಲ್ಲೆ, ಇಂದಿನ ವಿದ್ಯಾರ್ಥಿಗಳಲ್ಲಿ ಮಾಧ್ಯಮ ಸಾಕ್ಷರತೆ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ. ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ಮಾಧ್ಯಮ ಸಾಕ್ಷರತೆ, ಸಂವಹನ ಪ್ರಾಮುಖ್ಯತೆ ಕುರಿತಾದ ನವೀನವಾದ ನಾನಾ ಕೋರ್ಸ್‌ಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಕುರಿತು ಗಂಭೀರವಾಗಿ ಚಿಂತಿಸಲಿದೆಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷರಾದ ಪ್ರೊ. ಎಸ್.ಆರ್. ನಿರಂಜನ ಹೇಳಿದರು.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿರುವ ಸಂವಹನ ವಿಭಾಗದ ಸುವರ್ಣ ಮಹೋತ್ಸವ (1973-2023) ಪ್ರಯುಕ್ತ ‘ಮೀಡಿಯಾ ಸ್ಪಿಯರ್- 2024,’ ‘ಭಾರತೀಯ ಮಾಧ್ಯಮ ಉದ್ಯಮದ ರೂಪಾಂತರ’ ರಾಷ್ಟ್ರೀಯ ಸಮ್ಮೇಳನವನ್ನು ಬೆಂಗಳೂರು ವಿವಿಯ ಸಂವಹನ ವಿಭಾಗ, ಭಾರತೀಯ ಸಂವಹನ ಕಾಂಗ್ರೆಸ್ (ಐಸಿಸಿ) ಹಾಗೂ ಕರ್ನಾಟಕ ರಾಜ್ಯ ಪತ್ರಿಕೋದ್ಯಮ ಮತ್ತು ಸಂವಹನ ಶಿಕ್ಷಕರ ಸಂಘ (ಕೆಎಸ್ ಜೆಸಿಟಿಎ) ಸಹಯೋಗದೊಂದಿಗೆ ಜ್ಞಾನಭಾರತಿ ಆವರಣದಲ್ಲಿರುವ ಪ್ರೊ. ವೆಂಕಟಗಿರಿಗೌಡ ಸಭಾಂಗಣದಲ್ಲಿ ಸೋಮವಾರದಂದು ಹಮ್ಮಿಕೊಂಡಿದ್ದ, ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿ,
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅಡಿಯಲ್ಲಿ ಕೌಶಲ್ಯಧಾರಿತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಮಾಧ್ಯಮ ಸಾಕ್ಷರತೆ ಮತ್ತು ಸಂವಹನ ಜ್ಞಾನ ಕೂಡ ಪ್ರಮುಖ ಕೌಶಲ್ಯವಾಗಿದ್ದು, ವಿದ್ಯಾರ್ಥಿಗಳ ಪಠ್ಯಶಿಕ್ಷಣ ಕ್ರಮದಲ್ಲಿ ಮಾಧ್ಯಮ ಜ್ಞಾನವನ್ನು ಕೂಡ ವಿಷಯವಾಗಿ ಸೇರ್ಪಡಿಸಲಾಗುವುದೆಂದು ಭರವಸೆ ನೀಡಿದರು.
ಮಾಧ್ಯಮ ಒಂದು ಸಮಾಜದ ಬಹುಮುಖ್ಯ ಅಂಗವಾಗಿದ್ದು,
ಸಮಾಜದ ಗಟ್ಟಿಧ್ವನಿಯಾಗಿ, ಕನ್ನಡಿಯಾಗಿ ಕಾರ್ಯ ನಿರ್ವಹಿಸುತ್ತಿದೆ. 1970-1980 ಅವಧಿಯ ದಶಕದ ಬಳಿಕ ಮಾಧ್ಯಮ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಹಾಗೆಯೇ ಒಂದು ಕಾಲದಲ್ಲಿ ನಿರ್ದಿಷ್ಟ ವಿಷಯದ ಕುರಿತು ಮಾಹಿತಿ ತಿಳಿದುಕೊಳ್ಳಲು ಅಷ್ಟೇ ಸೀಮಿತವಾಗಿದ್ದ ಮಾಧ್ಯಮ ಇಂದು ಬಹುದೊಡ್ಡ ಉದ್ಯಮವಾಗಿ ಬೆಳೆದು ನಿಂತಿದೆ.
ದೇಶದ ಆರ್ಥಿಕತೆಯ ಪ್ರಮುಖ ವಲಯವಾಗಿ ಮಾಧ್ಯಮ ನಿಂತಿದ್ದು, ಭಾರತದ ಜಿಡಿಪಿ ಏರಿಕೆಗೆ ಮನರಂಜನಾ ಮತ್ತು ಮಾಧ್ಯಮ ಕ್ಷೇತ್ರಗಳ ಕೊಡುಗೆಯೂ ಅಪಾರವಾಗಿದೆ. ಭಾರತದ ಮಾಧ್ಯಮ ಮನರಂಜನೆ, ಕ್ರೀಡೆ, ತಂತ್ರಜ್ಞಾನ, ಮುದ್ರಣ, ಡಿಜಿಟಲ್, ಸಾಮಾಜಿಕ ಜಾಲತಾಣ ಸೇರಿದಂತೆ ಅನೇಕ ರೂಪಾಂತರಗಳು ತಲೆ ಎತ್ತಿ ಬೃಹತ್ ಉದ್ಯಮ ವಲಯ ಸೃಷ್ಟಿ ಮಾಡಿದೆ.
ಮಾಧ್ಯಮ ಕ್ಷೇತ್ರ ಇಷ್ಟೆಲ್ಲಾ ಪ್ರಗತಿಯನ್ನು ಕಂಡಿದ್ದರೂ ವೃತ್ತಿಪರರ ಕೊರತೆ ಎದ್ದುಕಾಣುತ್ತಿದೆ. ವಿದ್ಯಾರ್ಥಿಗಳಲ್ಲಿ ಕೌಶಲ್ಯ, ಸಂವಹನದ ಕೊರತೆ ಕಾಡುತ್ತಿದೆ.
ದೇಶದ ಮುಖ್ಯ ವಲಯದಲ್ಲಿ ಕಾರ್ಯನಿರ್ವಹಿಸುವ ವಿದ್ಯಾರ್ಥಿಗಳಲ್ಲಿ ಗುಣಮಟ್ಟ ಹೆಚ್ಚಿಸುವ ಜವಬ್ದಾರಿ ವಿಶ್ವವಿದ್ಯಾಲಯ, ಶಿಕ್ಷಣ ಸಂಸ್ಥೆಗಳ ಮೇಲಿದೆ. ರಾಜ್ಯದ ಉನ್ನತ ಶಿಕ್ಷಣ ಪರಿಷತ್ತು ಕೂಡ ಈ ಬಗ್ಗೆ ಗಂಭೀರವಾಗಿ ಚಿಂತಿಸಲಿದೆ. ಪ್ರಜಾಪ್ರಭುತ್ವದ 4ನೇ ಅಂಗವಾಗಿರುವ ಮಾಧ್ಯಮದ ಪಾತ್ರ, ಶಕ್ತಿ, ಬಳಕೆ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಸಂವಹನ ವಿಭಾಗದ ವತಿಯಿಂದ ಈ ಕುರಿತು ಒಂದು ಪ್ರಸ್ತಾವನೆ ಸಲ್ಲಿಸುವಂತೆ ಸಲಹೆ ನೀಡಿ, ಇದರ ಬಗ್ಗೆ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನಲ್ಲಿ ಈ ಕುರಿತು ಚರ್ಚಿಸಿ ಅನುಷ್ಠಾನಕ್ಕೆ ಕ್ರಮ ವಹಿಸುವುದಾಗಿ ಭರವಸೆ ಕೂಡ ನೀಡಿದರು.
ವಿದ್ಯಾರ್ಥಿಗಳಲ್ಲಿ ಕೌಶಲ್ಯ ವೃದ್ದಿಸುವ ಗುರಿ ಹೊಂದಿರುವ ರಾಜ್ಯ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುವುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಬಿ.ಕೆ. ರವಿ ಮಾತನಾಡಿ,
ಬೆಂಗಳೂರು ವಿಶ್ವವಿದ್ಯಾಲಯ ಸಂವಹನ ವಿಭಾಗ ಸುವರ್ಣ ಮಹೋತ್ಸವ ಆಚರಿಸುತ್ತಿರುವುದು ಸಂಭ್ರಮ ಮತ್ತು ಹೆಮ್ಮೆಯ ಕ್ಷಣ. ಭಾರತದಲ್ಲಿ ದೂರದರ್ಶನ ಉದ್ಯಮದ ಬೆಳವಣಿಗೆಗೆ ಬೆಂಗಳೂರು ವಿವಿಯ ಸಂವಹನ ವಿಭಾಗ ಪ್ರಮುಖ ಕಾರಣವಾಗಿದೆ. ದೇಶದಲ್ಲಿ ಪ್ರಥಮಬಾರಿಗೆ ದೂರದರ್ಶನ ಶಿಕ್ಷಣ ಆರಂಭಿಸಿದ ಕೀರ್ತಿಯನ್ನು ಹೊಂದಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಶೇಕ್ ಲತೀಫ್, ಬೆಂಗಳೂರು ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ. ಶ್ರೀನಿವಾಸ್ ಚೌಡಪ್ಪ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ. ಬಿ. ಶೈಲಶ್ರೀ, ಭೂಪಾಲ್ ನ ಪತ್ರಿಕೋದ್ಯಮ ಮತ್ತು ಸಂವಹನ ಮಖನ್ ಲಾಲ್ ಚತುರ್ವೇದಿ ರಾಷ್ಟ್ರೀಯ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಕೆ.ಜಿ. ಸುರೇಶ್, ಪಶ್ಚಿಮ ಬಂಗಾಳದ ವಿಶ್ವ ಭಾರತಿ ಕೇಂದ್ರೀಯ ವಿಶ್ವವಿದ್ಯಾಲಯದ ಮುಖ್ಯಸ್ಥರಾಗಿರುವ ಪ್ರೊ. ಬಿಪ್ಲಾಬ್ ಲೋಹೋ ಚೌದರಿ, (ಒಡಿಶಾ) ಭುವನೇಶ್ವರ್ ನ ಉತ್ಕಲ್ ವಿಶ್ವವಿದ್ಯಾಲಯದ ಮಾಧ್ಯಮ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಪ್ರೊ. ಉಪೇಂದ್ರ ಪಾಢಿ, ವಿವಿಯ ಮತ್ತಿತರರು ಬೋಧಕ ಮತ್ತು ಭೋಧಕೇತರ ವರ್ಗದವರು, ಸಂಶೋಧನಾ ವಿದ್ಯಾರ್ಥಿಗಳು, ಸ್ನಾತಕೋತ್ತರ ವಿದ್ಯಾರ್ಥಿ ಸಮೂಹ,
ಉಪಸ್ಥಿತರಿದ್ದರು.
ಕೊನೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.