ದೇವನಹಳ್ಳಿಯಲ್ಲಿ ತಾಲ್ಲೂಕು ಸಾರ್ವಜನಿಕ ಕುಂದು ಕೊರತೆ ಸಭೆ 77 ಅಹವಾಲು ಸ್ವೀಕಾರ
ಸಾರ್ವಜನಿಕರ ಸಮಸ್ಯೆ ಶೀಘ್ರ ಬಗೆಹರಿಸಲು ಕ್ರಮ: ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್ ಮುನಿಯಪ್ಪ
ಬೆಂಗಳೂರು ಗ್ರಾಮಾಂತರ ಜಿಲ್ಲೆ,ಸಾರ್ವಜನಿಕರು ಜನಸ್ಪಂದನ ಸಭೆಗಳಲ್ಲಿ ಸಲ್ಲಿಸುವ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ ಶೀಘ್ರ ಬಗೆಹರಿಸಲಾಗುವುದು ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ಹೇಳಿದರು
ದೇವನಹಳ್ಳಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಕುಂದು ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಜೆಗಳ ಸೇವೆ ಮಾಡುವ ದೃಷ್ಟಿಯಿಂದ ಸರ್ಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಂಡಿದೆ. ಸಾರ್ವಜನಿಕರು ಸಮಸ್ಯೆಗಳನ್ನು ಹೊತ್ತು ಪ್ರತಿನಿತ್ಯ ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಹಾಗೂ ಜನರ ಬಳಿಗೆ ಸರ್ಕಾರವನ್ನು ಕಳುಹಿಸಿ ಪ್ರಜೆಗಳ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸಿ ಸ್ಥಳದಲ್ಲಿಯೇ ಪರಿಹರಿಸುವ ಸಲುವಾಗಿ ನಿಟ್ಟಿನಲ್ಲಿ ಸಾರ್ವಜನಿಕ ಕುಂದು ಕೊರತೆಗಳ ಸಭೆ ಸಹಕಾರಿಯಾಗಲಿದೆ. ಸಾರ್ವಜನಿಕರು ಸಲ್ಲಿಸಿರುವ ಅಹವಾಲುಗಳನ್ನು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ವಿಳಂಬ ಮಾಡದೆ ಅರ್ಜಿಗಳನ್ನು ಪರಿಶೀಲಿಸಿ ಶೀಘ್ರ ಇತ್ಯರ್ಥ ಪಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪೋಡಿ ಕಾರ್ಯ, ಒತ್ತುವರಿ ತೆರವು, ಸ್ಮಶಾನ ಭೂಮಿ ಅಭಿವೃದ್ಧಿ, ಹಕ್ಕು ಪತ್ರ ವಿತರಣೆ ,ಸಾಗುವಳಿ ಚೀಟಿ ವಿತರಣೆ, ಜಮೀನು ಸರ್ವೇಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಸಮಯ ನಿಗದಿ ಪಡಿಸಿ ಸಮಸ್ಯೆ ಬಗೆಹರಿಸಲಾಗುವುದು. ನಿವೇಶನ ರಹಿತ, ವಸತಿ ರಹಿತರಿಗೆ ಸೌಲಭ್ಯ ಕಲ್ಪಿಸಲು ಕ್ರಮ ವಹಿಸಲಾಗುವುದು ಎಂದು ಸಚಿವರು ಹೇಳಿದರು.
77 ಅರ್ಜಿ ಸ್ವೀಕಾರ
ಸರ್ಕಾರಿ ಜಾಗ ಒತ್ತುವರಿ, ಪೋಡಿ ಪ್ರಕರಣ, ಜಮೀನು ತಕರಾರು, ಜಮೀನು ಸರ್ವೆ ಕಾರ್ಯ, ಸ್ಮಶಾನ ಜಾಗ ಹಾಗೂ ರಸ್ತೆ ವ್ಯವಸ್ಥೆ, ಗೋಮಾಳ ಒತ್ತುವರಿ, ಹಕ್ಕು ಪತ್ರ ಹಂಚಿಕೆ, ಕೊಳವೆ ಬಾವಿ ಹಂಚಿಕೆ, ನಿವೇಶನ ಹಂಚಿಕೆ, ಚರಂಡಿ ನಿರ್ಮಾಣ ಮುಂತಾದ ಇತರೆ ಮೂಲಭೂತ ಸಮಸ್ಯೆಗಳು, ಸೇರಿದಂತೆ ಒಟ್ಟು 77 ಅಹವಾಲುಗಳನ್ನು ಸಾರ್ವಜನಿಕರಿಂದ ಸ್ವೀಕರಿಸಲಾಯಿತು.
ಸಭೆಯಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದ(ಬಯಪ) ಅಧ್ಯಕ್ಷ ಶಾಂತಕುಮಾರ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅಧ್ಯಕ್ಷರಾದ ರಾಜಣ್ಣ, ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ದುರ್ಗಶ್ರೀ ಎನ್, ಜಿ.ಪಂ ಉಪಕಾರ್ಯದರ್ಶಿ ಟಿ.ಕೆ ರಮೇಶ್, ದೇವನಹಳ್ಳಿ ತಹಶೀಲ್ದಾರ್ ಶಿವರಾಜ್, ಕಾರ್ಯ ನಿರ್ವಾಹಕ ಅಧಿಕಾರಿ ಶ್ರೀನಾಥ್ ಗೌಡ, ಸಚಿವರ ಆಪ್ತ ಕಾರ್ಯದರ್ಶಿ ನಟರಾಜ್, ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು, ಜಿಲ್ಲಾ & ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.