ಸರಸ್ವತಿಯ ವರಪುತ್ರಿಗೆ ಕವಯಿತ್ರಿ ಕಮಲಾ ಹಂಪನಾಭಾವಪೂರ್ಣ ನುಡಿನಮನ
ಕನ್ನಡ ಸಾರಸ್ವತ ಲೋಕದ ಹಿರಿಯ ಲೇಖಕಿ, ನಮ್ಮ ದೇವನಹಳ್ಳಿ ತಾಲ್ಲೂಕಿನ ಹೆಮ್ಮೆಯ ಕವಯಿತ್ರಿ
ಕಮಲಾ ಹಂಪನಾ ಅವರು ಸಾಹಿತ್ಯ ಕ್ಷೇತ್ರದಲ್ಲಿ ಅಚ್ಚಳಿಯದ ಹೆಜ್ಜೆ ಗುರುತುಗಳನ್ನು ಮೂಡಿಸಿದವರು. ಅವರು ಶೈಕ್ಷಣಿಕ ವಲಯದಲ್ಲಿ ಸಿ. ಆರ್. ಕಮಲಮ್ಮ ಅಥವಾ ಕಮಲಾ ಮೇಡಂ ಎಂದು ಪರಿಚಿತರು. ಅವರು ಕಥೆ, ಕಾವ್ಯ, ನಾಟಕ, ವಿಮರ್ಶೆ ಇವುಗಳ ಜೊತೆಗೆ ತಮ್ಮ ಬಹುತೇಕ ಸಮಕಾಲೀನ ಲೇಖಕಿಯರಿಗಿಂತ ಭಿನ್ನವಾಗಿ ಸಂಪಾದನೆ, ಸಂಶೋಧನಾ ಕ್ಷೇತ್ರಗಳಲ್ಲಿಯೂ ಮುನ್ನುಗ್ಗಿ ಹೆಸರನ್ನು ಮಾಡಿರುವುದು ಗಮನಾರ್ಹ ಸಂಗತಿಯಾಗಿದೆ.ದೇವನಹಳ್ಳಿ ತಾಲ್ಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿದ್ದರು ಎಂದು ಅಖಿಲ ಕರ್ನಾಟಕ ಮಿತ್ರ ಸಂಘದ ಅಧ್ಯಕ್ಷರಾದ ಚಿ.ಮಾ. ಸುಧಾಕರ್ ತಿಳಿಸಿದರು.
ವಿಜಯಪುರ ಪಟ್ಟಣದಲ್ಲಿರುವ ಸರ್ಕಾರಿ ಮಾದರಿ ಹೆಣ್ಣುಮಕ್ಕಳ ಪಾಠಶಾಲೆಯ ಆವರಣದಲ್ಲಿ ಅಖಿಲ ಕರ್ನಾಟಕ ಮಿತ್ರ ಸಂಘದ ಆಶ್ರಯದಲ್ಲಿ ಶ್ರೀಮತಿ ಕಮಲ ಹಂಪನಾ ರವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಚಂದ್ರಶೇಖರ್ ಹಡಪದ್ ರವರು ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತಾ ದೇವನಹಳ್ಳಿಯಲ್ಲಿ ಅಕ್ಟೋಬರ್ 28, 1935ರಲ್ಲಿ ಜನಿಸಿದ ಕಮಲಾ ಹಂಪನಾ ಅವರಿಗೆ ಹುಟ್ಟಿನಿಂದಲೇ ಸುಸಂಸ್ಕೃತ, ಸಾಂಸ್ಕೃತಿಕ ಪರಿಸರ ದೊರೆಯಿತು. ಅಂದಿನ ದಿನಗಳಲ್ಲಿ ಮನೆಯಲ್ಲಿ ಶ್ರೀಮಂತಿಕೆಯ ಮತ್ತು ಮನೆತನದ ಸಾಂಸ್ಕೃತಿಕ ಪರಂಪರೆಗಳ ಅನುಕೂಲವಿದ್ದದ್ದರಿಂದ ಸಂಗೀತ ಪ್ರವಚನ ಕಾರ್ಯಕ್ರಮಗಳು ಮತ್ತು ಸಾಂಸ್ಕೃತಿಕ ಉತ್ಸವಗಳು ಮನೆಯ ಆವರಣದಲ್ಲೇ ದೊರೆಯುವಂತಿತ್ತು.. ಪ್ರತಿಭಾವಂತರಾಗಿದ್ದ ಅವರು ಶಾಲಾ ದಿನಗಳಿಂದಲೇ ನಿರರ್ಗಳವಾಗಿ ಮಾತನಾಡಬಲ್ಲ, ಭಾಷಣಗಳಿಂದ ಮೋಡಿ ಹಾಕಬಲ್ಲ ಸಾಮರ್ಥ್ಯ ರೂಢಿಸಿಕೊಂಡಿದ್ದರು.
ಬಿ.ಎ, ಆನರ್ಸ್ ಓದುವ ಸಮಯದಲ್ಲಿ ಅವರಿಗೆ ಗುರುಗಳಾಗಿದ್ದವರು ಪ್ರೊ. ತೀ.ನಂ.ಶ್ರೀ, ಡಿ. ಎಲ್. ನರಸಿಂಹಾಚಾರ್, ತ. ಸು. ಶಾಮರಾಯರು, ಕೆ. ವೆಂಕಟರಾಮಪ್ಪ, ಎಸ್. ವಿ. ಪರಮೇಶ್ವರ ಭಟ್ಟರು, ಡಾ. ಎಸ್. ಶ್ರೀಕಂಠಶಾಸ್ತ್ರಿ ಮುಂತಾದವರು.
ಜೊತೆಗಾರರಾಗಿ, ಸಹಪಾಠಿಗಳಾಗಿದ್ದ, ಅ.ರಾ ಮಿತ್ರ, ಪ್ರೊ. ಎಂ.ಎಚ್. ಕೃಷ್ಣಯ್ಯ, ಡಾ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ, ಎಚ್. ಜಿ. ಸಣ್ಣಗುಡ್ಡಯ್ಯ ಮೊದಲಾದವರು ಇಂದು ಸಾಹಿತ್ಯ ಲೋಕದಲ್ಲಿ ಹೆಸರಾದವರು ಎಂಬ ಹೆಮ್ಮೆಯ ಭಾವ ಅವರದು. ಕಾಲೇಜಿನ ದಿನಗಳಿಂದಲೇ ಸಹಪಾಠಿಗಳಾಗಿ ಪರಸ್ಪರ ಪರಿಚಯದೊಂದಿಗೆ ದಂಪತಿಗಳಾದವರು ಎಚ್. ಪಿ. ನಾಗರಾಜಯ್ಯ ಮತ್ತು ಕಮಲಾ. ಕಮಲಾ ಹಂಪನ ಅವರು 1959ರಿಂದ ಕನ್ನಡ ಅಧ್ಯಾಪಕರಾಗಿ ವೃತ್ತಿರಂಗ ಪ್ರವೇಶಿಸಿದರು. 18ನೆಯ ಶತಮಾನದ ಪರಮದೇವ ಕವಿಯ ‘ತುರಂಗ ಭಾರತ – ಒಂದು ಅಧ್ಯಯನ’ ಎಂಬ ವಿಷಯದ ಮೇಲೆ ಮಹಾ ಪ್ರಬಂಧವನ್ನು ರಚಿಸಿ ಡಾಕ್ಟರೇಟ್ ಪಡೆದರು. ಹತ್ತಾರು ದೇಶ ವಿದೇಶಗಳಲ್ಲಿ ನಡೆದ ಅಂತರರಾಷ್ಟ್ರೀಯ ವಿಚಾರ ಸಂಕೀರ್ಣಗಳಲ್ಲಿ ಭಾಗವಹಿಸಿದ ಲೇಖಕಿಯರಲ್ಲಿ ಕಮಲಾ ಅವರೆ ಮೊದಲಿಗರು. ಎಂದು ತಿಳಿಸಿದರು ಶಾಲಾ ಮುಖ್ಯೋಪಾಧ್ಯಾಯರಾದ ಮನೋಹರ್ ನುಡಿ ನಮನ ಸಲ್ಲಿಸುತ್ತಾ ಮಕ್ಕಳ ಸಾಹಿತ್ಯದ ಬಗ್ಗೆ ಹೇಳುವುದಾದರೆ, ಕಮಲಾ ಅವರು ರಮ್ಯ, ರೋಚಕ, ಸರಳ ಶೈಲಿಯ ಮೂಲಕ ಓದುಗರಿಗೆ ಪ್ರಿಯವೆನಿಸುವಂತೆ ಅಕ್ಕಮಹಾದೇವಿ, ವೀರವನಿತೆ ಓಬವ್ವ, ಹೆಳವನಕಟ್ಟೆ ಗಿರಿಯಮ್ಮ, ಡಾ.ಅಂಬೇಡ್ಕರ್, ಜನ್ನ, ಚಿಕ್ಕವರಿಗಾಗಿ ಚಿತ್ರದುರ್ಗ, ಮುಳುಬಾಗಿಲು ಇತ್ಯಾದಿ ಸುಂದರವಾದ ಕಥೆಗಳನ್ನು ರಚಿಸಿದ್ದಾರೆ. ಪ್ರಾಚೀನ ಕಾಲದಿಂದ ಇಂದಿನವರೆಗಿನ ಕನ್ನಡ ಕಾವ್ಯ ಕವಿಗಳ ಒಂದು ಸ್ಥೂಲ ಪರಿಚಯವನ್ನು ಸಹಾ ನೀಡಿದ್ದಾರೆ. ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಕಾರ್ಯಾಧ್ಯಕ್ಷರಾದ ವಿ. ವಿಶ್ವನಾಥ್, ಪ್ರಧಾನ ಕಾರ್ಯದರ್ಶಿಗಳಾದ ಆರ್ ಮುನಿರಾಜ್ ಶಿಕ್ಷಕಿಯರಾದ ಮಾದವಿ, ದ್ರಾಕ್ಷಾಯಿಣಿ, ರಾಜೇಶ್ವರಿ ಹಾಗೂ ವಿಧ್ಯಾರ್ಥಿನಿಯರು ಉಪಸ್ಥಿತರಿದ್ದರು.